ಬಂಟ್ವಾಳ:ಕಳೆದ ಕೆಲವು ಸಮಯದಿಂದ ಮುನಿಸಿಕೊಂಡು ಅನಾರೋಗ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಂಗ್ರೆಸ್‍ನ ಹಿರಿಯ ಮುಖಂಡ, ಕೇಂದ್ರ ಮಾಜಿ ಸಚಿವ ಬಿ.ಜನಾಧನ ಪೂಜಾರಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬುಧವಾರ ತೆರಳಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇದೇ 19ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ ಸಚಿವ ರೈ ಅವರು ಜನಾರ್ದನ ಪೂಜಾರಿ ಅವರ ಕಾಲಿಗೆರಗಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಇದೇ ವೇಳೆ ಸಚಿವ ರೈ ಅವರ ತಲೆ ನೇವರಿಸಿದ ಪೂಜಾರಿ ಮಾತನಾಡಿ, ನಿಮಗೆ ದೇವರು ಒಳಿತನ್ನು ಮಾಡಲಿ. ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನತೆ ನೋಡಿ ಮತ ಚಲಾಯಿಸುವಷ್ಟು ಬುದ್ಧಿವಂತರಿದ್ದಾರೆ ಎಂದರು. ಜಿಲ್ಲೆಯ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ರಾಜ್ಯದಲ್ಲಿ ಕೂಡಾ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶುಭ ಹಾರೈಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಈ ಹಿಂದೆ ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮನೆಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸಚಿವ ರೈ ಅವರು ತನಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಕಣ್ಣೀರು ಹಾಕಿ ಪೂಜಾರಿ ಮುನಿಸಿಕೊಂಡಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‍ನಲ್ಲಿದ್ದ ಕೆ.ಹರಿಕೃಷ್ಣ ಬಂಟ್ವಾಳ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರೈ ಅವರನ್ನು ಆಣೆ ಪ್ರಮಾಣಕ್ಕೆ ಆಹ್ವಾನಿಸಿ ಗಮನ ಸೆಳೆದಿದ್ದರು.
