ಸುಳ್ಯ:  ನಗರ ಸಮೀಪದ ಆಲೆಟ್ಟಿ ಗ್ರಾಮದಲ್ಲಿ ಕಾಡನೆಗಳ ಹಾವಳಿ ಮುಂದುವರಿದಿದ್ದು, ಆಲೆಟ್ಟಿ ಗ್ರಾಮದ ಕಳಗಿ ಬೈಲ್ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಸತತ ಎರಡು ದಿನಗಳಿಂದ ಕೃಷಿ ಹಾನಿ ಮಾಡಿದೆ.

ಕೃಪಾಶಂಕರ ತುದಿಯಡ್ಕ, ಲೋಲಜಾಕ್ಷ, ಅಚ್ಚುತ ಮಾಸ್ತರ್, ಯಶೋಧರ, ಚಿದಾನಂದ ಮತ್ತಿತರರ ತೋಟಗಳಿಗೆ ನುಗ್ಗಿದ ಆನೆ ಹಿಂಡು ಅಲ್ಲಲ್ಲಿ ದಾಳಿ ಮಾಡಿ ತೆಂಗು, ಕಂಗು, ಬಾಳೆ ಮತ್ತಿತರ ಕೃಷಿಗಳನ್ನು ನಾಶಪಡಿಸಿದೆ.

ಕೃಷಿ ಭೂಮಿಯನ್ನು ಪುಡಿಗಟ್ಟಿರುವ ಗಜಪಡೆಗಳು ನೀರಿನ ಪೈಪ್ ಗಳನ್ನೂ ನಾಶಪಡಿಸಿದ್ದು ಮರಗಳನ್ನು ಸಿಗಿದು ಹಾಕಿರುವುದು ಕಂಡು ಬಂದಿದೆ. ಜನ ವಸತಿ ಪ್ರದೇಶದ ಸಮೀಪದಲ್ಲಿಯೇ ಬೀಡು ಬಿಟ್ಟಿರುವ ಆನೆಗಳು ಕತ್ತಲಾಗುತ್ತಿದ್ದಂತೆ ತೋಟಗಳಿಗೆ ನುಗ್ಗುತ್ತಿದೆ. ಆನೆಗಳ ಹಿಂಡು ಯಾವಾಗ ದಾಳಿ ನಡೆಸುತ್ತದೆ ಎಂಬ ಭೀತಿಯಿಂದ ಜನರು ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ.

ಸಂಜೆಯಾಗುತ್ತಿದ್ದಂತೆ ಆನೆಗಳು ನಾಡಿಗೆ ದಾಂಗುಡಿಯಿಡುವ ಕಾರಣ ಜನರು ಮನೆಯಿಂದ ಹೊರ ಬರಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಮತ್ತು ನಗರ ಸಮೀಪದ ಭಸ್ಮಡ್ಕ, ತುದಿಯಡ್ಕ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *