ಪುಣೆ: ಪುಣೆ-ಸತಾರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತವಾಗಿದ್ದು, ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ಕರ್ನಾಟಕದ 19 ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ 13 ಜನರು ಗಾಯಗೊಂಡಿದ್ದಾರೆ.
ಮಂಗಳವಾರ ಬೆಳಗ್ಗಿನ ಜಾವ ಟ್ರಕ್ ಡಿವೈಡರ್‌ಗೆ ಢಿಕ್ಕಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ. ಕರ್ನಾಟಕದ ವಿಜಯಪುರ ಜಿಲ್ಲೆಯ ತಾಂಡಾವೊಂದರ 35 ಜನರು ಮಹಾರಾಷ್ಟ್ರದಲ್ಲಿ ಕೂಲಿ ಕೆಲಸ ಮಾಡಲು ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಟ್ರಕ್‌ನಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ಯಂತ್ರ ಇದ್ದ ಕಾರಣ ಟ್ರಕ್ ಉರುಳಿದ ಸಂದರ್ಭ 19 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಮಾರು 13 ಮಂದಿಗೆ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡ ನಿರ್ಮಾಣ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲಕ ಟ್ರಕ್‌ನ್ನು ವೇಗವಾಗಿ ಚಲಿಸುತ್ತಿದ್ದ ಕಾರಣ ಮುಂಬೈ-ಬೆಂಗಳೂರು ಹೆದ್ದಾರಿಯ ತಿರುವಿನಲ್ಲಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಮಕ್ಕಳು ಸಹಿತ 19 ಜನರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿದೆ’’ ಎಂದು ಪರ್ಗಾಂವ್-ಖಂಡಾಲಾ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಯುವರಜ್ ಹಾಂಡೆ ತಿಳಿಸಿದ್ದಾರೆ
-ANI

