ಮಂಡ್ಯ: ಜೆಡಿಎಸ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡಲು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾರು? ರಾಹುಲ್ ಗಾಂಧಿ ನನಗೆ ಲೆಕ್ಕಕ್ಕೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹೆಬ್ಬಕವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡಲು ರಾಹುಲ್ ಗಾಂಧಿ ಯಾರು? ರಾಹುಲ್‌ಗೆ ಕರ್ನಾಟಕದ ಚಿತ್ರಣದ ಅರಿವೇ ಇಲ್ಲ. ‘ನಾನೇಕೆ ರಾಹುಲ್ ಅವರ ಪ್ರಶ್ನೆಗೆ ಉತ್ತರಿಸಲಿ, ಕಾಂಗ್ರೆಸ್ ಪಕ್ಷಕ್ಕಾಗಲಿ, ರಾಹುಲ್ ಗಾಂಧಿಗಾಗಲಿ ನಾನು ಗುಲಾಮ ಅಲ್ಲ ನನ್ನ ನಿಲುವಿನ ಬಗ್ಗೆ ಪ್ರಶ್ನೆ ಮಾಡಲು ಅಧಿಕಾರ ಇರುವುದು ಆರುವರೆ ಕೋಟಿ ಕನ್ನಡಿಗರಿಗೆ ಮಾತ್ರ ಎಂದು ತಿಳಿಸಿದರು.
ರಾಜಕಾರಣ ಮಾಡುವುದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಕಾಲು ಹಿಡಿದಕೊಂಡವರು ಯಾರು..? ಬಿಬಿಎಂಪಿ ಅಧಿಕಾರಾಕ್ಕಾಗಿ ಯಾರು ಯಾರ ಮನೆಗೆ ಬಂದಿದ್ದರು..? ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ನೈತಿಕತೆ ಇಲ್ಲ ಎಂದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಜಿಲ್ಲೆ ಜನರನ್ನು ಹುರುಳಿ ಬೆಳೆಯುವಂತೆ ಮಾಡಿದ್ದು ಅವರ ಸಾಧನೆ ಎಂದರು.

