download

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಯನ್ನು ಉದ್ಧಾರ ಮಾಡಲಿಕ್ಕೆ ಬರುವುದು ಬೇಡ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ವಾಗ್ದಾಳಿ ನಡೆಸಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪ್ರಮೋದ್‌ಗೆ ಈ ಬಾರಿಯ ಚುನಾವಣೆಯಲ್ಲಿ ಸೋಲುವುದು ಗೊತ್ತಾಗಿದೆ. ಅದಕ್ಕಾಗಿ ಇನ್ನೊಂದು ಪಕ್ಷದ ಬಾಗಿಲು ಬಡಿಯುತ್ತಿದ್ದಾರೆ. ಬಿಜೆಪಿಗೆ ಬರಲು ಅವರಿಗೆ ಇಚ್ಛೆ ಇದ್ದರೆ ಜಿಲ್ಲಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿ, ವಿನಂತಿ ಮಾಡಿಕೊಳ್ಳಲಿ. ನಾವು ಅದನ್ನು ಪರಿಶೀಲಿಸಿ ಮುಂದೆ ಸೇರಿಸಿಕೊಳ್ಳುತ್ತೇವೆ. ಅದು ಬಿಟ್ಟು ಗೊಂದಲ ಸೃಷ್ಠಿ ಮಾಡುವುದು ಸರಿಯಲ್ಲ ಎಂದರು.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 2000 ಕೋಟಿ ರೂ. ಅನುದಾನ ತಂದು ರಾಜ್ಯಕ್ಕೆ ನಂಬರ್ ಒನ್ ಶಾಸಕ ಎಂದು ಹೇಳಿ ಕೊಳ್ಳುತ್ತಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಇನ್ನೊಂದು ಪಕ್ಷದ ಗೇಟಿನ ಬಳಿ ಹೋಗುವ ದಯನೀಯ ಸ್ಥಿತಿ ಯಾಕೆ ಬಂತು. ಬಿಜೆಪಿಯ ಬಾಗಿಲು ಬಡಿಯುವ ಅವಶ್ಯಕತೆ ಅವರಿಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರಮೋದ್ ಮಧ್ವರಾಜ್ ನಾಯಕರಾಗಿ ಬಿಜೆಪಿಗೆ ಬರುವ ಅವಶ್ಯಕತೆ ಇಲ್ಲ. ಕಾರ್ಯಕರ್ತನಾಗಿ ಬೇಕಾದರೆ ಬರಲಿ. ನಾಯಕರು ನಮ್ಮಲ್ಲಿ ತುಂಬಾ ಮಂದಿ ಇದ್ದಾರೆ. ಅವರ ಅನಿವಾರ್ಯತೆ ನಮಗೆ ಇಲ್ಲ. ನಿಮ್ಮ ಪಕ್ಷದ ಗೇಟಿನ ಹತ್ತಿರ ಅವರು ಬಂದಿದ್ದಾರಾ ಎಂಬ ಪ್ರಶ್ನೆಗೆ ರಾತ್ರಿ ಬಂದು ಹೋಗಿದ್ದಾರಾ ಗೊತ್ತಿಲ್ಲ. ಹಗಲಿನಲ್ಲಿ ಬಂದಿರುವುದು ನಾವು ನೋಡಿಲ್ಲ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಉಪೇಂದ್ರ ನಾಯಕ್, ಪ್ರಭಾಕರ ಪೂಜಾರಿ, ಶ್ರೀಶ ನಾಯಕ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *