ಉಡುಪಿ: ದೇಶದ ಪ್ರಗತಿ ಒಬ್ಬನಿಂದ ಅಸಾಧ್ಯ. ಎಲ್ಲರೂ ಜತೆಯಾಗಿ ಸಾಗಿದರೆ ಮಾತ್ರ ದೇಶಾಭಿವೃದ್ಧಿ ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪಡುಬಿದ್ರೆಯಲ್ಲಿ ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಣ್ಣ ಮತ್ತು ನಾರಾಯಣ ಗುರು ಮಹಾನ್ ಪುರುಷರು, ನುಡಿದಂತೆ ನಡೆ ಎನ್ನುವುದು ಅವರ ಸಂದೇಶ. ಆದರೆ ಬಿಜೆಪಿಯ ನರೇಂದ್ರ ಮೋದಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪೂರೈಸದೆ ನುಡಿದಂತೆ ನಡೆಯದ ಪ್ರಧಾನಿ ಮೋದಿ ಎಂದು ವ್ಯಂಗ್ಯವಾಡಿದರು .
ನಾರಾಯಣ ಗುರು, ಬಸವಣ್ಣ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರಿಗೆ ಬಡವರ, ದಲಿತರ ಬಗ್ಗೆ ಕಾಳಜಿ ಇಲ್ಲ. ಮೊದಲಿಗೆ ನಾರಾಯಣ ಗುರು ಪುಣ್ಯ ಭೂಮಿಗೆ ಬಂದಿದ್ದೇನೆ ಬಿರುಬೇಸಿಗೆಯಲ್ಲಿ ನನ್ನ ಭಾಷಣ ಕೇಳಲು ಬಂದಿದ್ದೀರಿ ನಿಮಗೆ ಅಭಿನಂದನೆಗಳು ಎಂದರು.
ಮೋದಿ ಹೋದಲ್ಲೆಡೆ ಹೇಳ್ತಾರೆ 70 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಮೂಲಕ ದೇಶಕ್ಕಾಗಿ ಬೆವರು ಸುರಿಸಿದವರನ್ನು ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

