KANAPUR-13-701x673

ಬೆಳಗಾವಿ: ಪೊಲೀಸರು ಇಂದು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡ ನಿವಾರಣೆಗೆ ಪ್ರಶಿಕ್ಷಣಾರ್ಥಿಗಳು ಹಾಗೂ ಪೊಲೀಸರಿಗೆ ತರಬೇತಿ ಅಗತ್ಯವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅಭಿಪ್ರಾಯಪಟ್ಟಿದ್ದಾರೆ.

ಖಾನಾಪೂರದ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ತರಬೇತಿ ಶಾಲೆಯ ರಜತ ಮಹೋತ್ಸವ ಹಾಗೂ 23ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಪೊಲೀಸರು ಯಾರ ಮುಲಾಜಿಗೂ ಒಳಗಾಗದೇ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಚುನಾವಣೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದು ಕಿವಿ ಮಾತು ಹೇಳಿದರು.

ಖಾನಾಪೂರ ಪೊಲೀಸ್ ತರಬೇತಿ ಶಾಲೆ ರಜತ ಮಹೋತ್ಸವವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಇಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಸಾವಿರಾರು ಪೊಲೀಸರು ಇಂದು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್.ಆರ್. ಚರಣರೆಡ್ಡಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು 8 ತಿಂಗಳ ಕಾಲ ಖಾನಾಪೂರ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು, ಕೆಲವೇ ದಿನಗಳಲ್ಲಿ ಸೇವೆಗೆ ಸೇರಲಿದ್ದಾರೆ. ಪ್ರಾಮಾಣಿಕ ಹಾಗೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಮಾಜದ ಸುಭದ್ರತೆ ಕಾಪಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಪೊಲೀಸ್ ತರಬೇತಿ ಶಾಲೆಯ ರಜತ ಮಹೋತ್ಸವದ ನಿಮಿತ್ತ ರಚಿಸಿದ ಸ್ಮರಣ ಸಂಚಿಕೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಹಾಗೂ ಇನ್ನಿತರ ಗಣ್ಯರು ಇದೇ ವೇಳೆ ಬಿಡುಗಡೆಗೊಳಿಸಿದರು.

ಈ ವೇಳೆ  ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸದ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಆಕರ್ಷಕ ಪಥಸಂಚಲನ: ಪ್ರಶಿಕ್ಷಣಾರ್ಥಿಗಳು ಪರೇಡ ಕಮಾಂಡರ್ ಶಿವಾನಂದ.ಜಿ. ಚನ್ನಬಸಪ್ಪನವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ಮೈಸೂರು ನಗರ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಹಾಸನ, ಕೋಲಾರ, ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಒಟ್ಟು 294 ಪ್ರಶಿಕ್ಷಣಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿ ನಿಧಾನ ಹಾಗೂ ತ್ವರಿತ ಗತಿಯಲ್ಲಿ ಪಥ ಸಂಚಲನ ನಡೆಸಿದರು.

ರಾಜ್ಯ ತರಬೇತಿ ಪೊಲೀಸ್ ಮಹಾನಿರ್ದೇಶಕರಾದ ಪದಮ್‍ಕುಮಾರ ಗರ್ಗ್, ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್‍ರಾವ್, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಿ.ಸಿ. ರಾಜಪ್ಪ, ಎಸ್‍ಪಿ ಸುಧೀರಕುಮಾರ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್ ಇತರರು ಉಪಸ್ಥಿತರಿದ್ದರು. ಪೊಲೀಸ್ ಅಧೀಕ್ಷಕರು ಹಾಗೂ ತರಬೇತಿ ಶಾಲೆಯ ಪ್ರಾಂಶುಪಾಲರಾದ ಎಂ. ಕುಮಾರ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಪಿಎಸ್‍ಐ ಕೃಷ್ಣವೇಣಿ. ಸಿ.ಜಿ ಅವರು ನಿರೂಪಿಸಿದರು. ಪೊಲೀಸ್ ಉಪಾಧೀಕ್ಷಕರಾದ ಸಿ.ಆರ್. ನೀಲಗಾರ ಅವರು ವಂದಿಸಿದರು.

 

By Suddi9

Leave a Reply

Your email address will not be published. Required fields are marked *