ಧಾರವಾಡ: ಲಿಂಗಾಯತ ಸ್ವತಂತ್ರ ಧರ್ಮ ವಿಚಾರಕ್ಕೆ ಸಂಬಂಧಪಟ್ಟಂತೆ ವೀರಶೈವ ಮಠಾಧೀಶರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿರುವ ನಾಲ್ಕು ಸಾವಿರ ವೀರಶೈವ ಮಠಾಧೀಶರು ನಮ್ಮ ಪರವಾಗಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ರಾಜ್ಯದಲ್ಲಿ ಕೇವಲ 800 ವೀರಶೈವ ಮಠಾಧೀಶರಿದ್ದಾರೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಸಚಿವ ವಿನಯ ಕುಲಕರ್ಣಿ ಅವರ ಡೇರಿಯಲ್ಲಿ ನಡೆದ ಡೇರಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಿವಿಧ ಮಠಾಧೀಶರು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಅಲ್ಪಸಂಖ್ಯಾತ ಸಚಿವರುಗಳು ಕ್ಯಾಬಿನೆಟ್ ನಲ್ಲಿ ವಿರೋಧ ವ್ಯಕ್ತಪಡಿಸಿಲ್ಲ. ಮಾ.19ರಂದು ನಡೆಯುವ ಕ್ಯಾಬಿನೆಟ್ ನಲ್ಲಿ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದವರು, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಗದಗ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪಂಚಾಚಾರ್ಯರು ವಿಘ್ನ ಸಂತೋಷಿಗಳು. ಅವರು ಹೈಜಾಕ್ ಸ್ವಾಮೀಜಿಗಳಾಗಿದ್ದಾರೆ. ಅವರ ಸಮಾವೇಶಕ್ಕೆ ಕೇವಲ ಬೆರಳನಿಕೆಯಷ್ಟೇ ಜನ ಇದ್ದಾರೆ. ಲಿಂಗಾಯತ ಧರ್ಮಕ್ಕೆ ಮೀಸಲಾತಿ ಸಿಗುವುದಕ್ಕೆ ಅವರು ಕಲ್ಲು ಹಾಕುವುದು ಸರಿಯಲ್ಲ. ನಾವೆಲ್ಲ ಸ್ವಾಮೀಜಿಗಳು ಒಗ್ಗಟ್ಟಾಗಿದ್ದೇವೆ. ಬಸವಣ್ಣನವರ ಕಾಲದಿಂದಲೂ ಈ ಹೋರಾಟ ನಡೆಯುತ್ತಿದೆ. ಇಂಥ ಹೋರಾಟದ ದಿಕ್ಕು ತಪ್ಪಿಸುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಇತರ ಮಠಾಧೀಶರು ಇದ್ದರು.

