ಇಂಫಾಲ: 14 ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಮಣಿಪುರದ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾರನ್ನು ಬಿಡುಗಡೆಗೊಳಿಸಿ ಎಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಭಾರತೀಯ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರ ಹಿಂಪೆಡಯಬೆಕೆಂದು ಆಗ್ರಹಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಉಪವಾಸದ ಮೂಲಕ ಆತ್ಮಹತ್ಯೆ ಪ್ರಯತ್ನ ನಡೆಸುತ್ತಿದ್ದಾರೆಂದು ಆರೋಪಿಸಿ ಗೃಹಬಂಧನಕ್ಕೊಳಪಡಿಸಲಾಗಿತ್ತು.
ಶರ್ಮಿಳಾ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂಬುದನ್ನು ಸಾಬೀತುಪಡಿಸಲು ಸಮರ್ಪಕ ಸಾಕ್ಷ್ಯಾಧಾರಗಳಿಲ್ಲ. ಶರ್ಮಿಳಾರಿಂದ ಯಾವುದೇ ತಪ್ಪು ಆಗಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಅವರಿಗೆ ವಿಧಿಸಲಾಗಿರುವ ಗೃಹಬಂಧನ ತೆರವು ಗೊಳಿಸಬೇಕು ಎಂದು ಕೋರ್ಟ್ ಹೇಳಿದೆ.
1958ರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂಪಡೆಯಬೇಕೆನ್ನುವುದು ಶರ್ಮಿಳಾ ಅವರ ಬೇಡಿಕೆ. ಇದು ಸತ್ಯಾಗ್ರಹದ ರೂಪದಲ್ಲಿದೆ. ತನ್ನ ಬೇಡಿಕೆಯನ್ನು ಸರ್ಕಾರ ಈಡೇರಿಸುವವರೆಗೂ ಶರ್ಮಿಳಾ ಈ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಅವರ ಈ ಹಿಂದಿನ ನಡವಳಿಕೆಗಳಿಂದ ನ್ಯಾಯಾಲಯಕ್ಕೆ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ, ಅವರು ಸತ್ಯಾಗ್ರಹವನ್ನು ಮುಂದುವರಿಸಲು ನಿರ್ಧರಿಸಿದ್ದೇ ಆದಲ್ಲಿ, ಮಣಿಪುರ ಸರ್ಕಾರ ಅವರ ಆರೋಗ್ಯ ಹಾಗೂ ಭದ್ರತೆ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಉಪವಾಸದಿಂದಾಗಿ ನಿತ್ರಾಣಗೊಂಡಿರುವ 42 ವರ್ಷದ ಶರ್ಮಿಳಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಗೆ ಮೂಗಿನ ಮೂಲಕ ದ್ರವರೂಪದ ಆಹಾರವನ್ನು ನೀಡಿ ಆಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ.