ಬಂಟ್ವಾಳ: ಕಾರ್ಕಳ ತಾಲ್ಲೂಕಿನ ಹೊಸ್ಮಾರು ಬಲ್ಯೊಟ್ಟು ಶ್ರೀ ಗುರುದೇವ ಆಶ್ರಮ ವತಿಯಿಂದ ಸುಮಾರು 700ಕ್ಕೂ ಮಿಕ್ಕಿ ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಸಮಾಜಮುಖಿ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸಲು ಸಂಘ ಸಂಸ್ಥೆಗಳು ಮುಂದಾದರೆ ಅಂತಹ ಸಂಘಟನೆ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಹೊಸ್ಮಾರು ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೆನ್ನೂರುಪದವು ಶ್ರೀ ಭಗವತಿ ಸೇವಾ ಸಂಘದ ವತಿಯಿಂದ ಏರ್ಪಡಿಸಿದ್ದ 5ನೇ ವರ್ಷದ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಗೆ ಬದಲಾಗಿ ಅಲ್ಲಿನ ಗುಣಮಟ್ಟದ ಶಿಕ್ಷಣ ಪಡೆದು ದೇಶೀಯ ಸಂಸ್ಕೃತಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮಾತನಾಡಿ, ಸಮಾಜ ಸೇವೆ ಜತೆಗೆ ಧಾರ್ಮಿಕತೆ ಬೆಳೆಸಿಕೊಂಡಾಗ ಸಂಸ್ಕಾರ ಮತ್ತು ಸೌಹಾರ್ದಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರ್ಪೆ ಮತ್ತು ಉಪನ್ಯಾಸಕ ಡಾ.ವಿಶ್ವನಾಥ ಪೂಜಾರಿ ಹೆನ್ನೂರುಪದವು ಅವರನ್ನು ಸನ್ಮಾನಿಸಲಾಯಿತು ಹಾಗೂ ಗರಿಷ್ಠ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಮಹಿಳಾ ಘಟಕ ಅಧ್ಯಕ್ಷೆ ಲಲಿತಾ ಡೀಕಯ ಪೂಜಾರಿ, ಗೌರವಾಧ್ಯಕ್ಷೆ ಸುಧಾ ಕಂಡದಬೆಟ್ಟು ಮತ್ತಿತರರಿದ್ದರು.
ಸಂಘದ ಅಧ್ಯಕ್ಷ ಕೆ.ವಸಂತ ಶಾಂತಿ ಸ್ವಾಗತಿಸಿ, ಕಾರ್ಯದರ್ಶಿ ರುದೇಶ್ ಪೂಜಾರಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಸಿಹಿತ್ಲು ಭಗವತಿ ಮೇಳದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

