ಪಾಂಡವಪುರ: ಪುಟ್ಟಣ್ಣಯ್ಯ ಅವರ ಹೋರಾಟವನ್ನು ತಾನು ಪ್ರಾಮಾಣಿಕವಾಗಿ ಮುಂದುವರೆಸುತ್ತೇನೆ ಎಂದು ದಿ.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದ್ದಾರೆ.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ವಿರೇಶ ಬಾನುಲಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಮ್ಮ ನೇತಾರನಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವರ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಜನಸ್ತೋಮ ಕಂಡು ನಮಗೆ ದಿಗ್ಭ್ರಮೆಯಾಯಿತು. ಇಂತಹ ಪುಟ್ಟಣ್ಣಯ್ಯ ಅವರನ್ನು ತಂದೆಯಾಗಿ ಪಡೆದ ನಾವೇ ಧನ್ಯರು ಎಂದ ಅವರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಕುಟುಂಬದವರಿಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಹಾಸನ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪ್ರಸ್ತುತ ರಾಜಕೀಯ ಸ್ಥಿತಿ ಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯಕ್ಕೆ ಹೋರಾಟಗಾರರ ಅನಿವಾರ್ಯತೆ ಇದೆ ಎನಿಸುತ್ತದೆ. ಈ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಅವರಂತೆ ಮತ್ತೊಬ್ಬ ಹೋರಾಟಗಾರರು ರಾಜಕಾರಣಕ್ಕೆ ಬರುವುದು ಅನಿವಾರ್ಯ ಎಂದರು.
ಪುಟ್ಟಣ್ಣಯ್ಯ ಅವರಿಗೆ ಸಮಾನ ಶಿಕ್ಷಣ ಜಾರಿಗೊಳಿಸುವುದರ ಬಗ್ಗೆ ಅಪಾರ ಒಲವಿತ್ತು, ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಅವರು ದ್ವನಿ ಎತ್ತಿದವರು. ನಾನು ಪಾಂಡವಪುರ ಉಪ ವಿಭಾಗದಲ್ಲಿ ಎಸಿ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ನನ್ನ ಸಮಾಜಮುಖಿ ಕೆಲಸಗಳಿಗೆ ಪುಟ್ಟಣ್ಣಯ್ಯ ಹೆಚ್ಚು ಉತ್ತೇಜನ ನೀಡಿದರು ಎಂದರು.

