ಬಂಟ್ವಾಳ:ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಸ್ಲಾಮೀಕರಣ, ಲವ್ ಜಿಹಾದ್ ಮತ್ತು ಗೋವು ಕಳ್ಳರಿಗೆ ನೆರವು ನೀಡುವ ನೆಪದಲ್ಲಿ ಪಿಎಫ್ಐ, ಕೆಎಫ್ಡಿ ಮತ್ತಿತರ ದೇಶದ್ರೋಹಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು 23ಕ್ಕೂ ಮಿಕ್ಕಿ ಮಂದಿ ಹಿಂದೂ ಯುವಕರ ಹತ್ಯೆ ಮತ್ತು ದಕ್ಷ ಅಧಿಕಾರಿಗಳ ಸರಣಿ ಸಾವಿಗೆ ಕಾರಣವಾಗುವ ಮೂಲಕ ಜನತೆಗೆ ‘ಹತ್ಯೆಭಾಗ್ಯ’ ಒದಗಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಆರೋಪಿಸಿದರು.
ಪ್ರತಿಯೊಂದು ಹತ್ಯೆ ಸಂದರ್ಭದಲ್ಲಿಯೂ ಹಿಂದೂ ಸಂಘಟನೆ ಮತ್ತಿತರ ಸಂಘ ಪರಿವಾರದ ಕಡೆಗೆ ಬೆರಳು ತೋರಿಸುತ್ತಿರುವ ಕಾಂಗ್ರೆಸ್ಸಿಗರು ಮತ್ತು ಕೆಲವೊಂದು ಬುದ್ಧಿಜೀವಿಗಳು ಸಾಹಿತಿ ಎಂ.ಎಂ.ಕಲ್ಬುರ್ಗಿ, ಲೇಖಕಿ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಮುಖ್ಯಮಂತ್ರಿ ಮತ್ತು ಅವರ ಗೃಹ ಇಲಾಖೆ ವೈಫಲ್ಯ ಸೇರಿದಂತೆ ಪ್ರತೀ ವರ್ಷ ಸಾವಿರಾರು ಮಂದಿ ಹಿಂದೂ ಯುವತಿಯರ ಕಣ್ಮರೆ ಮತ್ತು ಮಾನವ ಕಳ್ಳಸಾಗಾಟ ಬಗ್ಗೆ ಮಾತನಾಡುತ್ತಿಲ್ಲ ಏಕೆ…? ಎಂದು ಅವರು ಪ್ರಶ್ನಿಸಿದರು.
ಈಚೆಗೆ ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ಅಮಾಯಕ ದೀಪಕ್ ರಾವ್ ಮತ್ತು ಬಶೀರ್ ಹತ್ಯೆ ಬಳಿಕ ಚುನಾವಣೆ ಸೋಲಿನ ಭೀತಿಯಿಂದ ಇವರಿಬ್ಬರ ಮನೆಗೂ ತರಾತುರಿಯಲ್ಲಿ ಭೇಟಿ ನೀಡಲು ದುಂಬಾಲು ಬೀಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಕಾಂಗ್ರೆಸ್ನ ದ್ವೇಷದ ರಾಜಕೀಯಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಅಕ್ರಮ ಜಮೀನು, ಮರ ಮತ್ತು ಮರಳು ದಂಧೆಯಿಂದ ಜಿಲ್ಲೆಯಲ್ಲಿ ಕೋಮು ಸಂಘರ್ಷ ಮತ್ತು ಸರಣಿ ಹತ್ಯೆಗಳು ನಡೆಯುತ್ತಿದೆ. ಜಿಲ್ಲೆಯ ರೈತರು ಮತ್ತು ಶ್ರಮಜೀವಿಗಳು ಬೆವರು ಹರಿಸುವ ಇಲ್ಲಿನ ಪುಣ್ಯಭೂಮಿಗೆ ಹಿಂದೂ, ಮುಸ್ಲಿಂ, ಕ್ರೈಸ್ತರ ರಕ್ತ ಬೇಕಿಲ್ಲ. ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ ‘ಧರ್ಮ -ಅಧರ್ಮ’ ಹಾಗೂ ‘ಸಭ್ಯತೆ-ಅಸಭ್ಯತೆ’ ನಡುವೆ ಚುನಾವಣೆ ನಡೆಯುತ್ತಿದ್ದು, ಅಕ್ರಮ ದಂಧೆಗೆ ಬೆಂಗಾವಲಾಗಿರುವವರ ದುಡ್ಡಿನ ಆಸೆಗೆ ಬಲಿ ಬೀಳದೆ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದರು. ಜಿಲ್ಲೆಯ ಉಳ್ಳಾಲ ಮತ್ತು ಸುರತ್ಕಲ್ ಭಾಗದ ಶಾಸಕರು ಭಯೋತ್ಪಾದನಾ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ. ಇದೀಗ ಸೋಲಿನ ಭೀತಿಯಲ್ಲಿ ಸಚಿವ ರೈ ಚೇಲಾಗಳು ನನಗೆ ಬೆದರಿಕೆ ಪತ್ರ ಬರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕಳ್ಳಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುರುಷ ಎನ್.ಸಾಲಿಯಾನ್ ಮಾತನಾಡಿ, ಸಚಿವ ರೈ ಮತ್ತು ಅವರೊಂದಿಗೆ ಗುರುತಿಸಿಕೊಂಡ ನೈಜ ಹಿಂದೂಗಳು ಈ ಬಾರಿ ಯೋಚಿಸಿ ಮತದಾನ ಮಾಡಲಿದ್ದಾರೆ ಎಂದರು.ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿ, ಇಲ್ಲಿನ ಒಟ್ಟು 59 ಗ್ರಾಮಗಳಲ್ಲಿ 12 ದಿನ ನಡೆದ ಗ್ರಾಮ ನಡಿಗೆ ಕಾರ್ಯಕ್ರಮದಲ್ಲಿ ಜನರಿಂದ ದೊರೆತ ಸ್ಪಂದನೆ ನನಗೆ ಮತ್ತಷ್ಟು ಉಲ್ಲಾಸ ನೀಡಿದೆ ಎಂದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪರಿಶಿಷ್ಟ ಘಟಕ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ ಅಮ್ಟೂರು ಮತ್ತಿತರರು ಮಾತನಾಡಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ್, ಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಪ್ರಮುಖರಾದ ಪ್ರದೀಪ ಕುಮಾರ್ ಶೆಟ್ಟಿ, ಹರೀಶ ಶೆಟ್ಟಿ ಪಡು, ತನಿಯಪ್ಪ ಗೌಡ, ನಂದರಾಮ ರೈ, ಶ್ರೀಕಾಂತ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಮಚ್ಚೇಂದ್ರನಾಥ ಸಾಲ್ಯಾನ್, ವಜ್ರನಾಭ ಕಲ್ಲಡ್ಕ, ಉಮೇಶ ಶೆಟ್ಟಿ ಬಡಗಬೆಳ್ಳೂರು, ಪ್ರದೀಪ್ ಮಾರ್ಲ, ನಳಿನಿ ಬಿ.ಶೆಟ್ಟಿ, ಭಾರತಿ ಚೌಟ, ಬಬಿತಾ ಕೋಟ್ಯಾನ್, ವೇದಾವತಿ ಮತ್ತಿತರರು ಇದ್ದರು.
ಕ್ಷೇತ್ರ ಕಾರ್ಯದರ್ಶಿ ಸೀತಾರಾಮ ಪೂಜಾರಿ ವಂದಿಸಿದರು. ಕಿಶೋರ್ ಪಲ್ಲಿಪಾಡಿ ಕಾರ್ಯಕ್ರಮ ನಿರೂಪಿಸಿದರು.
