ಬಂಟ್ವಾಳ:ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಆರು ಅವಧಿಗೆ ಅಲ್ಲಾಹುವಿನ ಕೃಪೆಯಿಂದ ಶಾಸಕನಾಗಿ ಗೆದ್ದು ಬಂದಿರುವುದಾಗಿ ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ಧ ಬಿಜೆಪಿ ಯುವ ಮೋರ್ಚಾ ಸದಸ್ಯರೊಬ್ಬರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಸರಪಾಡಿ ಗ್ರಾಮದ ಬಜೆ ನಿವಾಸಿ ಸುದರ್ಶನ್ ಕುಮಾರ್ ಎಂಬವರು ದೂರು ಸಲ್ಲಿಸಿದ್ದು, ಕಳೆದ ತಿಂಗಳು ಡಿ.28ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಬ್ಯಾರಿ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿ ಸಚಿವ ರೈ ಅವರು ಇಂತಹ ಹೇಳಿಕೆ ನೀಡುವ ಮೂಲಕ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ಉಂಟು ಮಾಡಲು ಯತ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಂತಹ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ನೀಡಿರುವ ಈ ಹೇಳಿಕೆ ಸಮಂಜಸವಲ್ಲ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
