ಕೈಕಂಬ: ಮಹಿಳೆಯರು ಮತ್ತು ಯುವಜನರ ಸಬಲೀಕರಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿ ಸಾಧ್ಯ. ಮಹಿಳೆಯರು ಕುಟುಂಬದ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದಂತೆ, ಸಮಾಜ-ದೇಶದಲ್ಲೂ ಗುರುತಿಸವಂತಾಗಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವ ಸುರೇಶ್ ಪ್ರಭು ಹೇಳಿದರು.
ಗುರುಪುರ ಕೈಕಂಬದಲ್ಲಿ ಭಾನುವಾರ ಮಾತೃಭೂಮಿ ಸೌಹಾರ್ದ ಸಹಕಾರಿ(ರಿ) ಆಡಳಿತ ಕಚೇರಿ `ಮಾತೃಧಾಮ’ ಉದ್ಘಾಟಿಸಿ ಮಾತನಾಡಿದ ಸಚಿವರು, ದೇಶದಲ್ಲಿ ಈ ಜಿಲ್ಲೆಗೆ ಮಹತ್ವದ ಸ್ಥಾನವಿದ್ದು, ಆರ್ಥಿಕ ರಂಗದ ಮುಂಚೂಣಿ ಜಿಲ್ಲೆಯಾಗಿದೆ. ಜಿಲ್ಲೆಯ ಇಡ್ಲಿ-ದೋಸೆ ಈಗ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿಗುತ್ತಿದೆ. ಉನ್ನತ ಶಿಕ್ಷಣ, ವೈದ್ಯಕೀಯ ಮತ್ತು ಆರ್ಥಿಕ ರಂಗದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಂಸ್ಥೆಗಳು ದೇಶ ಕಟ್ಟುವಲ್ಲಿ ತಮ್ಮ ದೇಣಿಗೆ ನೀಡುವಂತಾಗಬೇಕು. ಈ ಹಣಕಾಸು ಸಂಸ್ಥೆಯು ಹೊಟೇಲಿಗೆ ಬದಲಾಗಿ ಮನೆಯೂಟದಂತೆ ಭಾವನಾತ್ಮಕ ಸಂಬಂಧ ಬೆಳೆಸುವಂತಾಗಲಿ ಎಂದು ಹಾರೈಸಿದರು.
2002ರಲ್ಲಿ ಸ್ಥಾಪನೆಯಾದ ಈ ಹಣಕಾಸು ಸಂಸ್ಥೆಯು ಸಾಲ ನೀಡುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಳ್ಳಲಿದೆ. ರಾಜ್ಯದಲ್ಲಿ ಕೆಲವಾರು ಶಾಖೆ ಹೊಂದಿರುವ ಮಾತೃಭೂಮಿ ಸಹಕಾರಿ ಬ್ಯಾಂಕ್ ಇದೀಗ ದೇಶದ ಯಾವುದೇ ಭಾಗದಲ್ಲಿ ಆರ್ಥಿಕ ವ್ಯವಹಾರ ವಿಸ್ತರಿಸಲು ಸರ್ಕಾರದಿಂದ ಅನುಮತಿ ಪಡೆದಿದೆ ಎಂದ ಸಭೆಯ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಈ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದವರೆಲ್ಲರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕ ಮಂಜುನಾಥ ಎಸ್ ಕೆ ಉಡುಪಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಸಹಕಾರಿ ನಿರ್ದೇಶಕ ಮಂಡಳಿಯ , ಭಾಸ್ಕರ ದೇವಸ್ಯ ,ವೆಂಕಟೇಶ್ ನಾವಡ, ಪೂವಪ್ಪ ಕುಂದರ್, ಕೃಷ್ಣ ಕೊಂಪದವು, ಶ್ರೀಧರ ರಾವ್, ಪಾವನಾ ಜೆ ಶೆಟ್ಟಿ, ವಿದ್ಯಾ ವಿ ಕಾಮತ್, ಪದ್ಮನಾಭ ರಾವ್, ಭಾಸ್ಕರ ವಿ. ಶೆಟ್ಟಿ ಹಾಗೂ ಸಿಬ್ಬಂದಿ, ಖಾತೆದಾರರು ಇದ್ದರು. ಭಾಸ್ಕರ್ ದೇವಸ್ಯ ಪ್ರಸ್ತಾವಿಸಿ ಸ್ವಾಗತಿಸಿದರು. ಪುರುಷೋತ್ತಮ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತನಿರ್ದೇಶಕ ಕೃಷ್ಣ ಕೊಂಪದವು ಧನ್ಯವಾದ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವೀಂದ್ರಪ್ರಭು ಮುಲ್ಕಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಿರೂಪಿಸಿದರು.









