ಗುರುಪುರ : ಭಾರತೀಯರಾದ ನಾವು ಶಕ್ತಿಯ ಆರಾಧಕರು. ನಮ್ಮ ದೇವರು ಬರೇ ಕೈಕಟ್ಟಿ ಕುಳಿತಿಲ್ಲ. ಅವರಿಗೆ ಎರಡಕ್ಕಿಂತ ಹೆಚ್ಚು ಕೈಗಳಿದ್ದು, ಅವುಗಳಲ್ಲಿ ಅಸ್ತ್ರಗಳನ್ನು ಹಿಡಿದುಕೊಂಡಿದ್ದಾರೆ. ಇಂತಹ ಶಕ್ತಿಯ ಆರಾಧಕರಾದ ನಾವು ಇಂದಿನ ಅಗತ್ಯಕ್ಕೆ ತಕ್ಕಂತೆ ಹೆಜ್ಜೆ ಇಡಬೇಕು ಮತ್ತು ಆಲೋಚಿಸಬೇಕು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹಿಂದೂಗಳಿಗೆ ಕರೆ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಗುರುಪುರದ ವಜ್ರದೇಹಿ ಮಠಕ್ಕೆ ಭೇಟಿ ನೀಡಿದ ಸಚಿವರು ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸಚಿವರಿಗೆ ಶ್ರೀ ವಜ್ರದೇಹಿ ಮಠದ ವತಿಯಿಂದ ಸನ್ಮಾನ ನಡೆಯಿತು.
ಅಖಂಡ ರಾಷ್ಟ್ರಗಳು ಗುರುತಿಸುವ ಭಾರತದ ಸಂಸ್ಕøತಿ ಸಂರಕ್ಷಿಸುವ ಅಗತ್ಯವಿದೆ. ಸರ್ಕಾರ ಕೈಗೊಂಡ ಕೈಕಂರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಚಿವ ಹೆಗಡೆಯವರು ಪ್ರಧಾನಿಗೆ ಹತ್ತಿರದ ಪ್ರಬಲ ಹಿಂದೂ ನಾಯಕರಾಗಿರುವುದು ನಮ್ಮ ಭಾಗ್ಯ. ನಮ್ಮ ಸಂಪನ್ಮೂಲಭರಿತ ಸಮಾಜಕ್ಕೆ ಲಾಭವಾಗಬೇಕಿದ್ದರೆ ಯುದ್ಧೋಪಾದಿಯಲ್ಲಿ ಕೆಲಸವಾಗಬೇಕು. ಹಿಂದೂ ಸಮಾಜ ಗಟ್ಟಿಯಾಗಲಿ. ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ತನ್ನ ಆಶೀರ್ವಚನದಲ್ಲಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ. ಭರತ್ ಶೆಟ್ಟಿ ಉಪಸ್ಥಿತರಿದ್ದರು. ಸಚಿವರಿಗೆ ಗುರುಪುರ ಬಿಜೆಪಿ ಅಧ್ಯಕ್ಷ ರಾಜೇಶ್ ಸುವರ್ಣ, ಹರೀಶ್ ಮಟ್ಟಿ ಹಾಗೂ ಇತರ ಪದಾಧಿಕಾರಿಗಳು ಸ್ವಾಗತ ಕೋರಿದರು. ಮಠದ ಅರುಣ್ ಭಟ್ ಖಂಡಿಗೆ ಸಚಿವರಿಗೆ ಫಲಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರೆ, ಮಠದ ಸಿಬ್ಬಂದಿಯು ಸತ್ಯಜಿತ್ ಮತ್ತು ಡಾ. ಭರತರನ್ನು ಸನ್ಮಾನಿಸಿದರು.
* ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.


