ಕೈಕಂಬ : ಇಲ್ಲಿನ ಶಿಬ್ರಿಕೆರೆಯ ಜುವಂಕಾರ್ ಟ್ರಸ್ಟ್(ರಿ) ಮತ್ತು ವಿಶ್ವ ಹಿಂದೂ ಪರಿಷತ್(ವಿಹಿಂಪ), ಬಜರಂಗ ದಳ, ಮಾತೃ ಮಂಡಳಿ ಹಾಗೂ ದುರ್ಗಾವಾಹಿನಿ ಗುರುಪುರ ಪ್ರಖಂಡ ಜಂಟಿ ಆಶ್ರಯದಲ್ಲಿ ಜ. 12ರಂದು ಸಂಜೆ ಶಿಬ್ರಿಕೆರೆ ಸೀತಾ ಮನೆ ಮಠಾರದಲ್ಲಿ ಸ್ವಾಮಿ ವಿವೇಕಾನಂದ ಮೂರ್ತಿ ಅನಾವರಣ, ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಿತು. ಇದಕ್ಕಿಂತ ಮುಂಚೆ ಹಿಂದೂ ಸಂಘಟನೆಯಿಂದ ಸತ್ಸಂಗ ಜರುಗಿತು.
ಪೊಳಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಸ್ವಾಮಿ ವಿವೇಕಾನಂದದ ಶಿಲಾಮೂರ್ತಿ ಅನಾವರಣಗೊಳಿಸಿದರು. “ಯುವ ಜನತೆ ವಿವೇಕಾನಂದರ ಆದರ್ಶ ಮೈಗೂಡಿಸಿಕೊಳ್ಳಬೇಕು. ನಮ್ಮ ಅಂತರಂಗ ಸ್ವಚ್ಚವಾಗಿರಬೇಕು ಮತ್ತು ನಮ್ಮಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸವಾಗಬೇಕು” ಎಂದು ಸ್ವಾಮಿ ಹೇಳಿದರು.
ಅತ್ಯಧಿಕ ಅಂಕ ಗಳಿಸಿದ ಯಶೋಧರ ಪೆರ್ಮುದೆ ಹಾಗೂ 1990-1992ರಲ್ಲಿ ಅಯೋಧ್ಯೆಯಲ್ಲಿ ಕರೆಸೇವೆಯಲ್ಲಿ ಪಾಲ್ಗೊಂಡಿದ್ದ ಎಡಪದವು ಪರಿಸರದ ಮೂವರು ಕರಸೇವಕರಾದ ಗಣಪತಿ ಕಣ್ನೋರಿ, ರಘುರಾಮ ಗೌಡ ಮತ್ತು ನಾಗೇಶ್ ಕೊಂಪದವು ಅವರನ್ನು ಸನ್ಮಾನಿಸಲಾಯಿತು.
ವಿಹಿಂಪ ಸಹ-ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡುತ್ತ, `ಲವ್ ಜಿಹಾದಿ’ನಿಂದ ನಮ್ಮ ಹೆಣ್ಮಕ್ಕಳು ಹೇಗೆ ಮೋಸದ ಬಲೆಗೆ ಬೀಳುತ್ತಾರೆ ಮತ್ತು ಅನ್ಯ ಕೋಮಿನವರು ಅವರನ್ನು ಹೇಗೆ ಭಯೋತ್ಪಾದನೆಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಹಲವು ಉದಾಹರಣೆಗಳೊಂದಿಗೆ ಹಿಂದೂ ಸಮಾಜಕ್ಕೆ ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿ, ವಿಹಿಂಪ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ್ ಮಾತನಾಡುತ್ತ, “ ಹಿಂದೂ ಸಮಾಜದಲ್ಲಿ ಆರ್ಥಿಕ ಬಡತನಕ್ಕಿಂತಲೂ ಹೆಚ್ಚಾಗಿ ಚಿಂತನೆ, ಮೌಲ್ಯಗಳು ಮತ್ತು ಸಂಸ್ಕಾರದ ದಾರಿದ್ರ್ಯವಿದೆ. ಮಕ್ಕಳು ಹೆಚ್ಚು ವಿದ್ಯಾವಂತರಾಗುತ್ತಲೇ ನಮ್ಮ ಸಂಸ್ಕೃತಿ ಬದಿಗೆಸೆದು ಪಾಶ್ಚಾತ್ಯ ಸಂಸ್ಕೃತಿಗೆ ಒಲವು ತೋರಿಸುತ್ತಾರೆ. ಮಕ್ಕಳಿಗೆ ಪಾಲಕರು ನಮ್ಮ ಸಂಸ್ಕೃತಿಯ ಆಳ-ಅಂದದ ಅರಿವು ಮೂಡಿಸಬೇಕು. ಮನೆಯೇ ಸಂಸ್ಕಾರ ಕೇಂದ್ರವಾದರೆ ಲವ್ ಜಿಹಾದ್ ಆಟವೇನೂ ನಡೆಯದು” ಎಂದರು.
ಸಭೆಯಲ್ಲಿ ಸಮಾಜದ ಆರ್ಥಿಕವಾಗಿ ಹಿಂದುಳಿದ 41 ಮಕ್ಕಳಿಗೆ ವಿದ್ಯಾರ್ಥಿ ವೇತನ ಹಂಚಲಾಯಿತು. ವೇದಿಕೆಯಲ್ಲಿ ಬಜರಂಗ ದಳ ಪ್ರಾಂತ ಸಂಯೋಜಕ ಶರಣ್ ಪಂಪ್ವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಉಪಾಧ್ಯಕ್ಷ ಮನೋಹರ ಸುವರ್ಣ, ಕಾರ್ಯದರ್ಶಿ ಗೋಪಾಲ ಕುತ್ತಾರು, ಬಜರಂಗ ಜಿಲ್ಲಾ ಸಂಯೋಜಕ ಭುಜಂಗ ಕುಲಾಲ್, ವಿಹಿಂಪ ಪ್ರಖಂಡ ಅಧ್ಯಕ್ಷ ವಿಷ್ಣ ಕಾಮತ್, ಬಜರಂಗ ದಳ ಪ್ರಖಂಡ ಸಂಯೋಜಕ ನವೀನ್ ಮೂಡುಶೆಡ್ಡೆ, ಎಡಪದವು ಘಟಕದ ಸಂಚಾಲಕ ಜನಾರ್ದನ ಗೌಡ, ಎಡಪದವು ಗ್ರಾಪಂ ಅಧ್ಯಕ್ಷೆ ಮಾಲತಿ, ಜುವಾಂಕರ್ ಟ್ರಸ್ಟಿನ ಆಡಳಿತ ಟ್ರಸ್ಟಿ ವಿಜಯಗೌಡ ಶಿಬ್ರಿಕೆರೆ ಭಾಗವಹಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ ಗೌಡ ಪಟ್ಲಚ್ಚಿಲ ಅಧ್ಯಕ್ಷತೆ ವಹಿಸಿದ್ದರು. ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಸುರೇಖಾರಾಜ್ ಸ್ವಾಗತಿಸಿದರು. ಟ್ರಸ್ಟ್ ಹಾಗೂ ದುರ್ಗಾವಾಹಿನಿ ಜಿಲ್ಲಾ ಸಹ- ಸಂಯೋಜಕಿ ವಿದ್ಯಾ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ವಿಜಯಗೌಡ ಶಿಬ್ರಿಕೆರೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಉಳಿತಾಯ ಭಾವನೆ ಬೆಳೆಸಿರುವ, ಜ. 12ರಂದು ನಿಧನರಾದ ನಿವೃತ್ತ ಪೋಸ್ಟ್ ಮಾಸ್ಟರ್ ವಿಠಲ ಮಾಸ್ಟರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
