ಬಂಟ್ವಾಳ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾಗಿ ಬೆಳೆಯಲು ಸಿಕ್ಕಿದ ಅವಕಾಶವನ್ನು ಸದುಪಯೋಗಿಸಿಕೊಂಡು ನಿಷ್ಠೆ ಮತ್ತು ನಿರಂತರ ಪರಿಶ್ರಮದಿಂದ ಸಾಧನೆಯ ಗುರಿ ತಲುಪಬೇಕು. ಪ್ರಸಕ್ತ ಉದ್ಯಮ ಕ್ಷೇತ್ರದಿಂದ ನ್ಯಾಯಾಂಗ ವ್ಯವಸ್ಥೆತನಕ ಸಂಘಟಿತರಾಗಿ ಬೆಳೆದಿರುವ ಬಂಟ ಸಮುದಾಯವು ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ವಿರಳವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

24btl-Banta
ತಾಲ್ಲೂಕಿನ ಬಂಟರ ಸಂಘದ ವತಿಯಿಂದ ತುಂಬೆ ಸಮೀಪದ ವಳವೂರು ಬಂಟವಾಳದ ಬಂಟರ ಭವನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಾಣುವುದರ ಜೊತೆಗೆ ಒಗ್ಗಟ್ಟು ಮತ್ತು ಸೌಹಾರ್ದತೆಯಲ್ಲಿ ಬಂಟರು ಇತರರಿಗೆ ಮಾದರಿಯಾಗಬೇಕು ಎಂದರು.ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಬಂಟ ಸಮುದಾಯದ ನಿವತ್ತ ಯೋಧರು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಕೂರಿಯಾಳಗುತ್ತು, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮಿನಾರಾಯಣ ಆಳ್ವ ಮತ್ತಿತರರು ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಮತ್ತಿತರರು ಇದ್ದರು.

ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ಆಶಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಂಘದ ಸದಸ್ಯರಿಂದ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *