ಅಡ್ಡೂರು: ಸ್ವಾತಂತ್ರ್ಯ ಪೂರ್ವದಿಂದ ಗಂಧಾಡಿ ಮಾಸ್ಟರ್ ರವರ ಮನೆಯಲ್ಲಿ ಪ್ರಾರಂಭಗೊಂಡು ಬಳಿಕ ಅಳಕೆ ಎಂಬ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಮುಂದೆ ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ ಮುಂದುವರಿದು ಅಲ್ಲಿಂದ ಗರಡಿ ಎ.ಎನ್ ಇಬ್ರಾಹೀಂ ರವರ ಜಾಗದ ಮುಳಿಹುಲ್ಲಿನ ಕಟ್ಟಡದಲ್ಲಿ ಅಧಿಕೃತವಾಗಿ 1967 ರಲ್ಲಿ ಸ್ಥಾಪನೆಗೊಂಡು ಮುಂದೆ ನಿರ್ದಿಷ್ಟ ಕಟ್ಟಡ ರಚನೆಗಾಗಿ ಕಡಂಬಾರು ಕುಟುಂಬಿಕರ ಧರ್ಮಾರ್ಥ ಸ್ಥಳದಾನದಿಂದ ಈಗ ನೆಲೆಗೊಂಡಿರುವ ಈ ಸ್ಥಳದಲ್ಲಿ ಸರಕಾರಿ ಶಾಲೆಯಾಗಿ ರೂಪುಗೊಂಡಿತು. ವಿದ್ಯಾಭಿಮಾನಿಗಳ ಶ್ರಮದ ಫಲವಾಗಿ ಈ ಶಾಲೆಯು ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ಶಾಘ್ಲನೀಯ.
ಮುಂದಿನ ಕೆಲವೇ ವರ್ಷಗಳಲ್ಲಿ ಮಕ್ಕಳ ದಾಖಲಾತಿ ಅಭಿವೃದ್ಧಿಯತ್ತ ಸಾಗಿ ಒಂದನೇ ತರಗತಿಯಲ್ಲಿ ನೂರಕ್ಕಿಂತಲೂ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿರುವುದು ಉಲ್ಲೇಖನೀಯ. ಆದರೆ 1995 ರ ಬಳಿಕ ಆಂಗ್ಲ ಮಾಧ್ಯಮ ಶಾಲೆಗಳು ಸ್ಥಾಪನೆಯಾಗಿ ಪೋಷಕರ ಒಲವು ಅತ್ತ ಸರಿಯಿತು.
ಆಂಗ್ಲ ಮಾಧ್ಯಮಗಳ ಹಾವಳಿಯಿಂದಾಗಿ ಮತ್ತು ಸರಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ನೀಡುತ್ತಿಲ್ಲ ಎಂಬ ಅಪಪ್ರಚಾರದಿಂದ ಈ ಶಾಲೆಯಲ್ಲಿ ದಾಖಲಾತಿಯು ಕುಂಠಿತವಾಯಿತು. ಈ ಎಲ್ಲಾ ಕಾರಣಗಳಿಂದ ದಾಖಲಾತಿಯು ಕ್ಷೀಣಿಸುತ್ತಿರುವುದನ್ನು ಮನಗಂಡ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ವಿದ್ಯಾಭಿಮಾನಿಗಳ ನೇತೃತ್ವದಲ್ಲಿ ದಾಖಲಾತಿ ಅಭಿಯಾನವನ್ನು 2009 ರಲ್ಲಿ ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದಿಂದ ಮತ್ತೆ ದಾಖಲಾತಿಯು ನಿಧಾನಗತಿಯಲ್ಲಿ ಅಭಿವೃದ್ಧಿಯನ್ನು ಪಡೆಯಿತು ಆ ಬಳಿಕ ಪ್ರತಿ ವರ್ಷವೂ ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿಯವರು ಮನೆ ಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ಮಕ್ಕಳನ್ನು ದಾಖಲಿಸಲು” ಬಾ ಮಗು ಸರಕಾರಿ ಶಾಲೆಗೆ ಎಂಬ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಸಂಘ-ಸಂಸ್ಥೆಗಳ ಸಹಕಾರದಿಂದ ಪ್ರತಿ ಮನೆಗೊಂದು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಂತೆ ಅಡುಗೆ ಸಿಬ್ಬಂದಿಯ ಲಭ್ಯತೆಯಿದೆ ಅಡುಗೆಗೆ ಬೇಕಾದ ಎಲ್ಲಾ ಪರಿಕರಗಳು ಅಭ್ಯವಿದ್ದು, ಪ್ರತಿದಿನ ಶಿಕ್ಷಕರು ರುಚಿ ನೋಡಿ ದೃಢೀಕರಿಸಿದ ನಂತರವೇ ಎಲ್ಲಾ ಮಕ್ಕಳು ಸಹಬೋಜನ ಮಾಡುತ್ತಾರೆ ಮತ್ತು ಹಾಲನ್ನು ಕುಡಿಯುತ್ತಾರೆ.
ಶಿಕ್ಷಕರ ಮತ್ತು ಸಿಬ್ಬಂದಿಯವರ ಬಾಂಧವ್ಯ ಉತ್ತಮವಾಗಿದೆ. ಆಟದ ಮೈದಾನವು ಚಿಕ್ಕದಾಗಿದ್ದರೂ ಹೋಬಳಿ ಮಟ್ಟದ ಪಂದ್ಯಾಟ ಮತ್ತು ಆಟೋಟ ಸ್ಪರ್ಧೆಗಳು ನಮ್ಮ ಶಾಲೆಯಲ್ಲಿ ನಡೆಯುತ್ತೆಂದು ಹೇಳಲು ತುಂಬಾ ಸಂತೋಷವಾಗುತ್ತದೆ ಪ್ರಸ್ತುತ ವರ್ಷದಲ್ಲಿ ನೆಟ್ ಬಾಲ್ ಪಂದ್ಯಾಟದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ನಮ್ಮ ವಿದ್ಯಾರ್ಥಿಗಳ ವಿಶೇಷ ಸಾಧನೆಯಾಗಿದೆ.
2016-17 ನೇ ಸಾಲಿನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ ಇವರ ನೇತ್ರತ್ವದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ ಹಾಗೂ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಗುರುಪುರ ಇವರ ಸಹಕಾರದಿಂದ ಪ್ರಸ್ತುತ ಸಾಲಿನಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಪ್ರಾರಂಭಿಸಿತು.
ಶಾಲೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ರವರು ಸರಕಾರದಿಂದ ಇನ್ನಷ್ಟು ಅನುದಾನವನ್ನು ತರುವಲ್ಲಿ ಸತತ ಶ್ರಮವಹಿಸುತ್ತಿದ್ದಾರೆ.
2016-17 ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ಮನಗಂಡು ಶಾಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷ ಎ.ಕೆ.ಜಬ್ಬಾರ್ ರವರ ನಾಯಕತ್ವದಲ್ಲಿ ಊರಿನ ಸಂಘ-ಸಂಸ್ಥೆಗಳ ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲಾ ಹಿತರಕ್ಷಣಾ ಸಮಿತಿ ಎಂಬ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದ್ದು ಇದರ ಅಧ್ಯಕ್ಷ ಡಾ.ಇ.ಕೆ.ಎ.ಸಿದ್ದೀಕ್ ಹಾಗೂ ಸರ್ವ ಸದಸ್ಯರ ಸಹಕಾರದಿಂದ ಮಕ್ಕಳ ದಾಖಲಾತಿ ಹಾಗೂ ಅಭಿವೃದ್ಧಿ ಬಗ್ಗೆ ವಿವಿಧ ರೀತಿಯ ಕಾರ್ಯಕ್ರಮಗಳು ಹಾಗೂ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.
ಸರಕಾರದ ಆದೇಶ ಪ್ರಕಾರ ಅಸ್ತಿತ್ವಕ್ಕೆ ಬಂದ ಹಳೇ ವಿದ್ಯಾರ್ಥಿ ಸಂಘವು ಎ.ಕೆ.ರಿಯಾಝ್ ರವರ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಹಕಾರ ಹಾಗೂ ಸೇವಾ ಮನೋಭಾವಯಿಂದ ಶಾಲಾ ಹಿತರಕ್ಷಣಾ ಸಮಿತಿಯೊಂದಿಗೆ ಜಂಟಿಯಾಗಿ ಕಾರ್ಯಚಟುವಟಿಯನ್ನು ಮಾಡುತ್ತಿದ್ದು ತಾತ್ಕಾಲಿಕ ವಾಹನದ ವ್ಯವಸ್ಥೆಯನ್ನು ಕಲ್ಪಿಸಿದ್ದು ಶಾಲೆಗೆ ಸ್ವತಃ ವಾಹನವನ್ನು ಖರೀದಿಸಲು ಸತತ ಪ್ರಯತ್ನವನ್ನು ಮುಂದುವರಿಸಿದ್ದು ಶೀಘ್ರದಲ್ಲೇ ವಾಹವನ್ನು ಖರೀದಿಸುವ ಯೋಜನೆಯ ರೂಪಿಸುತ್ತಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯ ಗುರಿಯನ್ನು ಇಟ್ಟುಕೊಂಡು ಶಾಲಾಭಿವೃದ್ಧಿ ಸಮಿತಿ, ಹಿತರಕ್ಷಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘವು ಪರಸ್ಪರ ಕೈಜೋಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದ್ದು, ಅತೀ ಶೀಘ್ರದಲ್ಲಿ ಪ್ರೌಢ ಶಾಲೆ ಪ್ರಾರಂಭವಾಗಬೇಕೆಂಬುದು ಗ್ರಾಮಸ್ಥರ ಬಯಕೆ.
ಡಿ.23ರಂದು ‘ಸುವರ್ಣ ಮಹೋತ್ಸವ’: ಶಾಲೆಯ 50 ವರ್ಷಚಾರಣೆಯ ಪ್ರಯುಕ್ತ ಶಾಲಾಭಿವೃದ್ಧಿ ಸಮಿತಿ, ಹಿತರಕ್ಷಣಾ ಸಮಿತಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ‘ಸುವರ್ಣ ಮಹೋತ್ಸವ’ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಂದು ನಡೆಯುವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಟಿ.ಅಹ್ಮದ್ ಬಾವ ರವರನ್ನು ಆಯ್ಕೆ ಮಾಡಲಾಗಿದೆ.
ವರದಿ: ಅಸ್ತಾರ್ ಅಡ್ಡೂರು,
ಹಳೆ ವಿದ್ಯಾರ್ಥಿ, ಸ.ಹಿ.ಪ್ರಾಥಮಿಕ ಶಾಲೆ ಅಡ್ಡೂರು.

