ಕುಪ್ಪೆಪದವು: ತುಳುನಾಡನ್ನು ಸೃಷ್ಟಿ ಮಾಡಿದ ಪರಶುರಾಮ ಮುನಿಗಳು ತಪಸ್ಸನ್ನು ಆಚರಿಸಿದ ಕ್ಷೇತ್ರವೆಂಬ ಪ್ರತೀತಿ ಇರುವ ಪುಣ್ಯಕ್ಷೇತ್ರ ಬಾರ್ದಿಲ ಶ್ರೀ ಸಾಂಬ ಸದಾಶಿವ ದೇವಸ್ಥಾನದ ಜೀರ್ಣೊದ್ದಾರದ ಕುರಿತು ಸಮಾಲೋಚನಾ ಸಭೆ ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಇರುವೈಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಿಂದ ಸುಮಾರು 1 ಕಿ.ಮೀ ದೂರದ ಬಾರ್ದಿಲದ ಸುಂದರ ಪ್ರಕೃತಿಯ ಮಡಿಲಲ್ಲಿ ಎತ್ತರದ ಗುಡ್ಡದಲ್ಲಿದ್ದು ಸುಮಾರು 38 ವರ್ಷಗಳ ಹಿಂದೆ 1979ರಲ್ಲಿ ಉಳಿಪಾಡಿಗುತ್ತು ಕಾಂತಪ್ಪ ಶೆಟ್ಟಿಯವರ ಮೊಕ್ತೇಸರಿಕೆಯಲ್ಲಿ ಇರುವೈಲಿನ ಶ್ರೀ ರಾಮ ಅಸ್ರಣ್ಣ ನೇತ್ರತ್ವದಲ್ಲಿ ನಾರಾಯಣ ನಾಯಕ್ ಬಾರ್ದಿಲ ಮತ್ತು ಆನಂದ ಶೆಟ್ಟಿ ಬಾರ್ದಿಲ ಹಾಗೂ ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಈಗಿನ ದೇವಸ್ಥಾನವನ್ನು ನಿರ್ಮಿಸಿ 1992 ಬ್ರಹ್ಮ ಕಲಶೋತ್ಸವ ನಡೆದಿತ್ತು.
ಆ ಸಂಧರ್ಭದಲ್ಲಿ ದೇವರ ಗರ್ಭಗುಡಿಯ ಜೊತೆಗೆ ಮತ್ತು ಬಲಭಾಗದ ಸುತ್ತು ಪೌಳಿಯನ್ನು ಮಾತ್ರ ನಿರ್ಮಿಸಲಾಗಿತ್ತು. ಕಳೆದ ವರ್ಷ ಕ್ಷೇತ್ರದಲ್ಲಿ ನಡೆದ ಸ್ವರ್ಣ ಪ್ರಶ್ನೆಯಲ್ಲಿ ದೇವಾಲಯದ ಸಂಪೂರ್ಣ ಜೀರ್ಣೊದ್ದಾರ ನಡೆಸಬೇಕೆಂದು ಬಂದ ಸೂಚನೆಯ ಅನ್ವಯ ಸುಮಾರು 2.30 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಗರ್ಭಗುಡಿ ಸುತ್ತುಪೌಳಿ ಅಗ್ರ ಸಭಾ ಗೋಪುರ ಗಣಪತಿ ಗುಡಿ ನಾಗ ರಕ್ತೇಶ್ವರಿ ಗುಡಿ ಮತ್ತು ಕೊಡಮಣಿತ್ತಾಯ ಚಾವಡಿ ಸಹಿತ ಸಂಪೂರ್ಣ ದೇವಾಲಯದ ಜೀರ್ಣೊದ್ದಾರ ನಡೆಸಲು ಉದ್ದೇಶಿಸಲಾಗಿದೆ.
ಗಣ್ಯರು ಹಾಗೂ ಭಕ್ತಾದಿಗಳನ್ನು ಒಳಗೊಂಡ ಜೀರ್ಣೊದ್ದಾರ ಸಮಿತಿಯನ್ನು ರಚಿಸಲಾಯಿತು .ದೇರೆಬೈಲ್ ಹರಿಕೃಷ್ಣ ತಂತ್ರಿ ಮತ್ತು ಶಿವಪ್ರಸಾದ್ ತಂತ್ರಿಗಳ ನೇತ್ರತ್ವದಲ್ಲಿ ಅನುಜ್ಞಾ ಕಲಶಾಧಿ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಕುಡುಪು ಕೃಷ್ಣರಾಜ ತಂತ್ರಿಯವರ ಉಸ್ತುವಾರಿಯಲ್ಲಿ ದೇವಾಲಯದ ನಿರ್ಮಾಣ ಕಾರ್ಯ ನಡೆಯಲಿದೆ. ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶಾಸಕ ಮೊಯ್ದಿನ್ ಬಾವ ಬಾರ್ದಿಲ ದೇವಸ್ಥಾನದ ಜೀರ್ಣೊದ್ದಾರ ಕಾರ್ಯಕ್ಕೆ ವೈಯಕ್ತಿಕವಾಗಿ ಮತ್ತು ಸರಕಾರದಿಂದ ಕೂಡಾ ಅನುದಾನವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಪೂಜಾರಿಯವರು ಕೂಡಾ ಧಾರ್ಮಿಕ ಪರಿಷತಿನಿಂದ ಸರ್ವ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ ಮೂಡಬಿದ್ರಿ, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಕೆಪಿಸಿಸಿಐ ಸದಸ್ಯ ಆರ್.ಕೆ. ಪ್ರಥ್ವಿರಾಜ್, ಕಿಲೆಂಜಾರು ಅರಮನೆಯ ದಿನೇಶ್ ಬಳ್ಳಾಲ್, ಎಡಪದವು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ನೀಲಯ್ಯ. ಎಂ ಅಗರಿ,ಆಡಳಿತ ಮೊಕ್ತೇಸರ ಸೋಮಶೇಖರ ಶೆಟ್ಟಿ ಉಳಿಪಾಡಿಗುತ್ತು, ಗ್ರಾಮ ಪಂಚಾಯತ್ ಸದಸ್ಯ ಹಿರಣ್ಯಾಕ್ಷ ಕೋಟ್ಯಾನ್, ಅರ್ಚಕ ರಾಘವೇಂದ್ರ ಕಾರಂತ್, ಗುತ್ತಿಗೆದಾರ ಜಗದೀಶ್ ಕುಳಾಲ್ ಪಾಕಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಭಕ್ತಾಧಿಗಳು ಸಭೆಯಲ್ಲಿ ಹಾಜರಿದ್ದರು.


We appreciate the achevement of the Vyavastapana samiti