ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ -ಭಂಡಾರಿಬೆಟ್ಟು ರಾಷ್ಟ್ರೀಯ ಹೆದ್ದಾರಿ ನಡುವಿನ ರಸ್ತೆ ಬದಿ ವಾಹನವೊಂದು ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೃತರನ್ನು ಸ್ಥಳೀಯ ಕಾಯರ್ಮಾರ್ ನಿವಾಸಿ ಅವಿವಾಹಿತ ಕೃಷಿಕ ರವೀಂದ್ರ ಪೂಜಾರಿ (42) ಎಂದು ಗುರುತಿಸಲಾಗಿದೆ. ಮೃತರಿಗೆ ತಾಯಿ ಮತ್ತು ಸಹೋದರ ಇದ್ದಾರೆ.

ಭಾನುವಾರ ಮುಂಜಾನೆ ಇದೇ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೋಡಿ ಸ್ಥಳೀಯರು ಮತ್ತು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರ ಮುಖ ಮತ್ತಿತರ ಕಡೆಗಳಲ್ಲಿ ರಕ್ತ ಮತ್ತಿತರ ಗಾಯ ಕಾಣಿಸಿಕೊಂಡಿದ್ದು, ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿದ್ದ ಪರಿಣಾಮ ಇದೊಂದು ಕೊಲೆ ಎಂಬ ಸುದ್ದಿ ತಾಲ್ಲೂಕಿನಾದ್ಯಂತ ಹರಡಿತ್ತು. ಆದರೆ ಶನಿವಾರ ರಾತ್ರಿ ಇವರು ರಸ್ತೆ ಬದಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
