ಮಂಗಳೂರು: ಕುದ್ರೋಳಿ ಬಳಿಯ ಮೊಯ್ದಿನ್ ನಗರದಲ್ಲಿ ಗುರುವಾರ ಬೀದಿನಾಯಿಗಳು ಎರಡು ವರ್ಷ ಪ್ರಾಯದ ಪುಟಾಣಿ ಮುಹಮ್ಮದ್ ಇಮಾದ್‌ನನ್ನು ಕಚ್ಚಿ ಎಳೆದೊಯ್ದು ಗಂಭೀರವಾಗಿ ಗಾಯಗೊಳಿಸಿದೆ.

ಮೊಯ್ದೀನ್ ನಗರ ಎರಡನೇ ಕ್ರಾಸ್ ನಿವಾಸಿ ಇಮ್ತಿಯಾಝ್ ಹಾಗೂ ಬದ್ರುನ್ನೀಸಾ ದಂಪತಿಯ ಮೂರನೆ ಪುತ್ರನಾಗಿರುವ ಮುಹಮ್ಮದ್ ಇಮಾದ್ ಗಂಭೀರವಾಗಿ ಗಾಯಗೊಂಡು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. babyಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಮನೆಯೊಳಗೆ ಹೆತ್ತವರು ಉಪಾಹಾರ ಸ್ವೀಕರಿಸುತ್ತಿದ್ದ ಸಂದರ್ಭ ಅಂಗಳದಲ್ಲಿ ಆಟವಾಡುತ್ತಿದ್ದ ಇಮಾದ್‌ನನ್ನು ಬೀದಿ ನಾಯಿಗಳು ಎಳೆದೊಯ್ದಿವೆ. ಮಗುವಿನ ಚೀರಾಟ ಕೇಳಿ ಮನೆಯವರು ಹೊರಬಂದಾಗ ನಾಯಿಗಳು ಮಗುವನ್ನು ಮನೆಯಿಂದ ಬಹುದೂರ ಎಳೆದೊಯ್ದಿದ್ದು, ಮನೆಯವರ ಬೊಬ್ಬೆಗೆ ನಾಯಿಗಳು ಮಗುವನ್ನು ಬಿಟ್ಟು ಓಡಿವೆ. ಹಣೆ, ಹೊಟ್ಟೆ, ತಲೆಯ ಹಿಂಭಾಗ ಹಾಗೂ ತೊಡೆಯ ಹಿಂಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಮಾದ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯೊಳಗೆ ಉಪಾಹಾರ ಸೇವಿಸುತ್ತಿದ್ದ ಸಂದರ್ಭ ಹೊರಗಡೆ ಮಗುವಿನ ಚೀರಾಟ ಕೇಳಿ, ಹೊರ ಹೋಗಿ ನೋಡಿದಾಗ ಮಗುವನ್ನು ನಾಯಿಗಳು ಎಳೆದೊಯ್ಯುತ್ತಿದ್ದವು. ನಮ್ಮ ಬೊಬ್ಬೆ ಕೇಳಿ ನಾಯಿಗಳು ಮಗುವನ್ನು ಬಿಟ್ಟು ಓಡಿವೆ ಎಂದು ತಾಯಿ ಬದ್ರುನ್ನೀಸಾ ರೋದಿಸುತ್ತಾ ತಿಳಿಸಿದರು. ಬೀದಿನಾಯಿಗಳ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು. ಮತ್ತೆ ಯಾವುದೇ ಮಕ್ಕಳಿಗೆ ಈ ರೀತಿಯಾಗಬಾರದು ಎನ್ನುತ್ತಾರೆ ಮಗುವಿನ ತಂದೆ ಇಮ್ತಿಯಾಝ್.

ಬೀದಿನಾಯಿಗಳ ಹಾವಳಿ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *