ಬಂಟ್ವಾಳ: ಕ್ರೀಡೆಯು ವಿದ್ಯಾರ್ಥಿಯ ಕೀಳರಿಮೆ ತೊರೆದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಎಂದು ಎಸ್.ವಿ.ಎಸ್ ಪದವಿ ಕಾಲೇಜು ಉಪಪ್ರಾಂಶುಪಾಲ ಪ್ರೊ. ತುಕಾರಾಮ ಪೂಜಾರಿ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ದ.ಕ. ಜಿಲ್ಲಾಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಟೇಬಲ್ ಟೆನ್ನಿಸ್ ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಶ್ರೀಮಂತರು ಐಷಾರಾಮದ ಜೀವನಕೋಸ್ಕರ ಕೋಟಿಗಟ್ಟಲೆ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಕೆಲವರು ಹಸಿವು -ಬಡತನ ಮುಂತಾದ ದಾರಿದ್ರ್ಯಕ್ಕೆ ಸಿಕ್ಕಿ ಮನುಷ್ಯ ತನ್ನ ತನವನ್ನೆ ಮರೆಯುತ್ತಿದ್ದಾನೆ. ಪಂದ್ಯಾಟದಲ್ಲಿ ಎಲ್ಲರಿಗೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ತಾನೂ ಎಂದೂ ಎದೆಗುಂದದೆ ಸೋಲನ್ನು ಸವಾಲಾಗಿ ಸ್ವೀಕರಿಸಿ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಎಸ್.ವಿ.ಎಸ್ ಪ. ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿ, ಸ್ಫರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿ ಸಕಾರತ್ಮಕ ದೃಷ್ಟಿಕೋನವನ್ನು ಮಾನಸಿಕವಾಗಿ ಗಮನದಲ್ಲಿಟ್ಟುಕೊಂಡರೆ ತನ್ನ ನಿರ್ದಿಷ್ಟ ಗುರಿಮುಟ್ಟಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಹುಡುಗಿಯರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಪ.ಪೂ. ಕಾಲೇಜಿನ ತಂಡವು ಪ್ರಥಮ ಬಹುಮಾನವನ್ನು ಮತ್ತು ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜಿನ ತಂಡವು ದ್ವಿತೀಯ ಬಹುಮಾನವನ್ನು ಗಳಿಸಿರುತ್ತದೆ. ಹುಡುಗರ ವಿಭಾಗದಲ್ಲಿ ಪುತ್ತೂರು ತಾಲೂಕಿನ ವಿವೇಕಾನಂದ ಪ.ಪೂ. ಕಾಲೇಜಿನ ತಂಡವು ಪ್ರಥಮ ಸ್ಥಾನ ಮತ್ತು ಮಂಗಳೂರು ನಗರದ ಸೈಂಟ್ ಆಲೋಸಿಯಸ್ಸ್ ಪ.ಪೂ. ಕಾಲೇಜಿನ ತಂಡವು ದ್ವಿತೀಯ ಬಹುಮಾನವನ್ನು ಗಳಿಸಿರುತ್ತದೆ.
ಹುಡುಗಿಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಬಂಟ್ವಾಳ ಎಸ್.ವಿ.ಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಮೇಘಶ್ರೀ ಮತ್ತು ಹುಡುಗರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿ ಪ್ರಮೀತ್‍ಚಂದ್ರ ಇವರು ಬೆಸ್ಟ್ ಪ್ಲೇಯರ್ ಆಫ್ ದಿ ಟುರ್ನಾಮೆಂಟ್ ಬಹುಮಾನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಎಸ್.ವಿ.ಎಸ್ ಪದವಿ ರಾಜಶಾಸ್ತ್ರ ಉಪನ್ಯಾಸಕಿ ಫೌಜಿಯಾ ಬಿ. ಎ. ಉಪಸ್ಥಿತರಿದ್ದರು,
ಅರ್ಥಶಾಸ್ತ್ರ ಉಪನ್ಯಾಸಕ ಹಾಗೂ ಕ್ರೀಡಾ ಸಲಹೆಗಾರ ಪ್ರದೀಪ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಉಪನ್ಯಾಸಕಿ ದಿವ್ಯಲಕ್ಷ್ಮೀ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಲೆಪ್ಟಿನೆಂಟ್ ಸುಂದರ್ ವಂದಿಸಿದರು.
