ಬಂಟ್ವಾಳ ; ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ದ.ಕ.ಜಿಲ್ಲಾಪೊಲೀಸ್ ವ್ಯಾಪ್ತಿಗೆ ನೂರು ಮಂದಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳ ನೇಮಕವಾಗುತ್ತದೆ, ಪ್ರತೀ ಠಾಣೆಗೆ 5 ರಿಂದ 6 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗುವುದು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಬಂಟ್ವಾಳ ರೋಟರೀ ಕ್ಲಬ್ ನ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಗ್ರಾಮಗಸ್ತು ಸಭೆ ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಗಾಗಲೇ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ತಲಾ ಇಬ್ಬರಂತೆ ಪ್ರೊಭೆಷನರಿ ಸಬ್ ಇನ್ಸ್ಫೆಕ್ಟರ್ ಗಳನ್ನು ನೇಮಕಗೊಳಿಸಲಾಗಿದೆ, ಕಲ್ಲಡ್ಕ ಹಾಗೂ ಫರಂಗಿಪೇಟೆಯ ಹೊರಠಾಣೆಗಳನ್ನು ಪೂರ್ಣಪ್ರಮಾಣದ ಠಾಣೆಗಳಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ತಿಳಿಸಿದರು.ಈಗಾಗಲೇ ಜಿಲ್ಲಾದ್ಯಂತ ಜಾರಿಯಲ್ಲಿರುವ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತೀ ಗ್ರಾಮದಲ್ಲೂ ಅನುಷ್ಠಾನಕ್ಕೆ ತರಲಾಗುವುದು, ಕಾರಣಾಂತರಗಳಿಂದ ಕೆಲವೊಂದು ಗ್ರಾಮಗಳಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಅತೀಶೀಘ್ರದಲ್ಲಿ ಪ್ರತೀ ಗ್ರಾಮದಲ್ಲೂ ಬೀಟ್ ಪೊಲೀಸ್ ವ್ಯವಸ್ಥೆಯ ಸಭೆಯನ್ನು ಈಗಾಗಲೇ ನಿಯುಕ್ತಿಗೊಳಿಸಿದ ಸಿಬ್ಬಂದಿಗಳ ಉಸ್ತುವಾರಿಯಲ್ಲಿ ನಡೆಸಲಾಗುವುದು ಎಂದರು.
ಸಾಕ್ಷಿಧಾರರನ್ನಾಗಿಸುವುದಿಲ್ಲ..
ಯಾವುದೇ ಅಪಘಾತ ಪ್ರಕರಣಗಳಲ್ಲಿ ಗಾಯಾಳುಗಳನ್ನು ಮಾನವೀಯ ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಶುಶ್ರೂಷೆ ಕೊಡಿಸುವುದು ಪ್ರತಿಯೊಬ್ಬನ ಜವಬ್ದಾರಿಯಾಗಿದೆ, ಅಂತವರನ್ನು ಅಪಘಾತ ಪ್ರಕರಣದ ಸಾಕ್ಷಿಧಾರರನ್ನಾಗಿಸಲಾಗುತ್ತಿದೆ ಎಂಬ ಭಯ ಬೇಡ ಎಂದು ಮೆಲ್ಕಾರ್ ನ ಎಂ.ಎನ್.ಕುಮಾರ್ ರವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರಲ್ಲದೆ, ಪಕ್ಕದಲ್ಲೇ ಕುಳಿತ್ತಿದ್ದ ಸಬ್ ಇನ್ಸ್ಪೆಕ್ಟರ್ ರವರಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿದರು.ಮುಸ್ಲಿಂ ಹೆಣ್ಣುಮಕ್ಕಳಂತೆ ಘೋಷ ಹಾಕಿಕೊಂಡು ಭಿಕ್ಷುಕರಂತೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸ್ಥಳೀಯ ಬೀಟ್ ಪೊಲೀಸರಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರು, ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ನೀಡಿದವ ಹೆಸರ್ನು ಗೌಪ್ಯವಾಗಿರಿಸಲಾಗುವುದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ರಿಕ್ಷಾಗಳಲ್ಲಿ ನಿಯಮ ಮೀರಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು, ಪ್ರಯಾಣಿಕರನ್ನು ಸಾಗಿಸುತ್ತಾರೆ ಎಂದುಮೆಸ್ಕಾಂ ಸಲಹೆಗಾರ ವೆಂಕಪ್ಪ ಪೂಜಾರಿ ಎಸ್ಪಿಯವರ ಗಮನ ಸೆಳೆದರು. ಮೆಲ್ಕಾರ್ ನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಬ್ಬರು ಟ್ರಾಫಿಕ್ ಸಿಬ್ಬಂದಿಗಳನ್ನು ನೇಮಿಸಿ ಎಂದು ಮಾಜಿ ಕೌನ್ಸಿಲರ್ ದಾಮೋದರ್ ಒತ್ತಾಯಿಸಿದರು.
ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ, ಟ್ರಾಫಿಕ್ ಸಮಸ್ಯೆ, ಪೊಲೀಸ್ ಸಮುದಾಯ ಭವನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಪೊಲೀಸ್ ಸಮುದಾಯ ಭವನ ನಿರ್ಮಾಣದ ಬಗ್ಗೆ ಈ ಹಿಂದಿನ ಎಸ್ಪಿ ಡಾ.ಶರಣಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ವಿಶ್ವನಾಥ ಚೆಂಡ್ತಿಮಾರ್ ರವರು ಗಮನ ಸೆಳೆದರು.
ಸದಾಶಿವ ಪ್ರಭು ಬಂಟ್ವಾಳ, ಇದಿನಬ್ಬ ಕಲ್ಲಡ್ಕ, ಸತೀಶ್ ಮೆಲ್ಕಾರ್, ಮುಸ್ತಾಫಾ, ಮೊದಲಾದವರು ಸಮಸ್ಯೆಗಳನ್ನು ಮುಂದಿಟ್ಟರು.
ಬಂಟ್ವಾಳ ಎಎಸ್ಪಿ ಡಾ.ಅರುಣ್, ನಗರ ಠಾಣಾಧಿಕಾರಿ ರಕ್ಷಿತ್ ಗೌಡ, ಪ್ರೊಭೆಷನರಿ ಎಸೈಗಳಾದ ಪ್ರಸನ್ನ, ಪ್ರವೀಣ್ ಕುಮಾರ್, ಮಾದೇಶ ಎಂ, ನಿತ್ಯಾನಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.
