ಬಂಟ್ವಾಳ: ಇಲ್ಲಿನ ಬಿ.ಮೂಡದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಮತ್ತು ಸಾಹಿತ್ಯ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ತುಂಬೆ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕೆ.ಎನ್.ಗಂಗಾಧರ ಆಳ್ವ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ನಕಾರಾತ್ಮಕ ಅಂಶಗಳನ್ನೇ ಅಳವಡಿಸಿಕೊಳ್ಳುವುದರಿಂದ ನಿರ್ದಿಷ್ಟ ಗುರಿಗಳನ್ನು ಮುಟ್ಟಲು ವಿಫಲರಾಗುತ್ತಿದ್ದಾರೆ, ಕಲಿಕೆಯ ಜೊತೆಯಲ್ಲಿ ಕ್ರೀಡೆ , ಸಾಹಿತ್ಯ, ಪರಿಸರ ಮೊದಲಾದ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಪೂರ್ಣವಾಗಲು ಸಾಧ್ಯ ಎಂದು ಹೇಳಿದರು.ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಎಸ್.ವಿ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಮಾತನಾಡಿ, ಸಾಹಿತ್ಯದ ಓದು ಒಬ್ಬ ವ್ಯಕ್ತಿಯನ್ನು ಬಹುಮುಖಿ ಚಿಂತನೆಯ ಕಡೆಗೆ ಸೆಳೆಯುತ್ತದೆ, ಇದರಿಂದ ಸಮಾಜದ ಸರಿ-ತಪ್ಪುಗಳ ವಿಮರ್ಶೆ ಮಾಡುವ ಸಾಮಥ್ರ್ಯ ಹೆಚ್ಚುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಬರೆಯುವ ಮೊದಲು ಓದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸತೀಶ್ ಕುಲಾಲ್ ಹಾಗೂ ಲತೀಫ್ ಖಾನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಸರಸ್ವತಿ ಬಿ. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ. ಹಾಗೂ ಸಾಹಿತ್ಯ ಸಂಘದ ನಿರ್ದೇಶಕ ದಾಮೋದರ ಇ. ಸಂಘಗಳ ಚಟುವಟಿಕೆಗಳನ್ನು ಕುರಿತು ಮಾಹಿತಿ ನೀಡಿದರು. ಹಿರಿಯ ಉಪನ್ಯಾಸಕ ಯುಸುಫ್ ಸ್ವಾಗತಿಸಿದರು. ಅಬ್ದುಲ್ ರಝಾಕ್ ಧನ್ಯವಾದ ನೀಡಿದರು. ಕನ್ನಡ ಉಪನ್ಯಾಸಕಿ ಯಶೋಧ.ಕೆ ಕಾರ್ಯಕ್ರಮ ಸಂಯೋಜಿಸಿದರು.
