-
ಬಂಟ್ವಾಳ: ಪೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಹೈಟೆನ್ಷನ್ ವಿದ್ಯುತ್ ತಂತಿಗಳೆಲ್ಲಾ ಕೈಗೆಟಕುವ ಸ್ಥಿತಿಯಲ್ಲಿದೆ, ಕೇವಲ ಬಂದು ನೋಡಿ ಹೋಗುತ್ತಿರಿ, ಏನು ಕ್ರಮ ಕೈಗೊಳ್ಳುತ್ತಿಲ್ಲ, ಕಳೆದ ಗ್ರಾಮ ಸಭೆಯಲ್ಲಿ ಹೇಳಿದ ಸಮಸ್ಯೆಗಳೇ ಇನ್ನೂ ಬಗೆಹರಿದಿಲ್ಲ.ಅಮ್ಟಾಡಿ ಗ್ರಾಮಪಂಚಾಯಿತಿಯ ಅಧ್ಯಕ್ಷ ಹರೀಶ್ ಪಡು ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗ್ರಾಮಸಭೆಯಲ್ಲಿ ಪದೇ ಪದೇ ಸಮಸ್ಯೆಗಳನ್ನು ಮೆಲುಕು ಹಾಕುತ್ತಿದ್ದರೂ ಮೆಸ್ಕಾಂಗೆ ಸಂಬಂಧಪಟ್ಟ ಸಮಸ್ಯೆಗಳು ಹಾಗೆಯೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಗಿನ ಕೂರಿಯಾಳಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿವೆ.
-
ಎರಡು ಬಾರಿ ಗ್ರಾಮ ಸಭೆಯಲ್ಲಿಯೇ ಸಮಸ್ಯೆ ಹೇಳಿಕೊಂಡರೂ ಇನ್ನೂ ಪರಿಹಾರವಾಗಿಲ್ಲ ಎಂದು ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡರು. ಗ್ರಾಮಸಭೆಯಲ್ಲಿ ಹೇಳಿದ ಸಮಸ್ಯೆಗಳು ಯಾವುದೂ ಬಗೆಹರಿಯುವುದಿಲ್ಲ ಎನ್ನುವ ಗ್ರಾಮಸ್ಥರೊಬ್ಬರ ಆರೋಪಕ್ಕೆ ಗ್ರಾಮಸಭೆಯಲ್ಲಿ ಕೇಳಿ ಬಂದ ಸಮಸ್ಯೆಗಳು ಹಾಗೂ ನೀಡಿದ ಭರವಸೆಗಳನ್ನು ಲಿಖಿತವಾಗಿ ದಾಖಲಿಸಿಕೊಳ್ಳಲಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪಾಲನ ವರದಿ ಯನ್ನು ನೀಡಬೇಕು ಎಂದು ನೋಡಲ್ ಅಧಿಕಾರಿ ಸ್ಪಷ್ಟಪಡಿಸಿದರು. ಕೆಂಪುಗುಡ್ಡೆ ಪರಿಸರದಲ್ಲಿ ರಸ್ತೆ ಅಗಲೀಕರಣಗೊಳ್ಳುತ್ತಿದ್ದರೂ ರಸ್ತೆ ಮಧ್ಯೆಯೇ ವಿದ್ಯುತ್ ಕಂಬಗಳಿದ್ದು ತೆರವುಗೊಳಿಸಿಲ್ಲ ಎನ್ನುವ ದೂರು ಕೇಳಿ ಬಂತು.
ವಿದ್ಯುತ್ ಸಂಪರ್ಕ ಕೊಡಿಸಿ:
ನನ್ನಲ್ಲಿ ತೋಟ ನಿರ್ಮಿಸುವಷ್ಟು ಜಮೀನು ಇದೆ, ನಾಟಿ ಮಾಡಲು ಗಿಡಗಳು ಬೇಕಾಗಿದೆ. ಆದರೆ ನೀರಿಗಾಗಿ ಕೊಳವೆ ಅವಡಿಸಿದ್ದು ವಿದ್ಯುತ್ ಸಂಪರ್ಕ ನೀಡಲು ಪಂಚಾಯಿತಿ ಅನುಮತಿ ನೀಡುತ್ತಿಲ್ಲ. ಇಂತಹ ಪರಸ್ಥಿತಿಯಲ್ಲಿ ನೀವು ಗಿಡ ಕೊಟ್ಟರೂ ನಮಗೇನು ಪ್ರಯೋಜನ ? ಎಂದು ಕೃಷಿಕರೊಬ್ಬರು ತೋಟಗಾರಿಕಾ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು. 500ಮೀಟರ್ನೊಳಗೆ ಕೊಳವೆ ಬಾವಿ ಅಳವಡಿಸ ಬಾರದೆಂಬ ಸರಕಾರದ ಆದೇಶವಿದ್ದು ಆ ನಿಟ್ಟಿನಲ್ಲಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಿಸಲು ಅನುಮತಿ ನೀಡಿಲ್ಲ ಎಂದು ಪಿಡಿಓ ಸ್ಪಷ್ಟಪಡಿಸಿದರು. ಹಾಗಾದರೆ ಕೃಷಿ ನಾಶವಾದರೂ ನೀವೇನೂ ಮಾಡುವುದಿಲ್ಲವೇ ಎಂದು ಮಾಜಿ ತಾ.ಪಂ.ಸದಸ್ಯರೋರ್ವರು ಮರು ಪ್ರಶ್ನಿಸಿದಾಗ ಕಾನೂನು ವ್ಯಾಪ್ತಿಯನ್ನು ಮೀರಿ ಅನುಮತಿ ನೀಡಲಾಗುವುದಿಲ್ಲ ಎಂದು ನೋಡಲ್ ಅಧಿಕಾರಿ ಪ್ರತಿಕ್ರಿಯಿಸಿದರು.
ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ, ಪಿಡಿಓ ರಾಜಶೇಖರ ರೈ, ತಾ.ಪಂ. ಸದಸ್ಯೆ ಮಲ್ಲಿಕಾ ಶೆಟ್ಟಿ, ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
