ಬಂಟ್ವಾಳ: ಕಳೆದೆರಡು ದಿನದ ಹಿಂದೆ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಶವಯಾತ್ರೆ ಸಂದರ್ಭ ಅಹಿತಕರ ಘಟನೆಯಿಂದ ತತ್ತರಿಸಿದ್ದ ಬಿ.ಸಿ.ರೋಡು-ಕೈಕಂಬ ಪರಿಸರ ಸೋಮವಾರ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ.ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಬಿ.ಸಿ.ರೋಡು, ಕೈಕಂಬ, ಪಾಣೆಮಂಗಳೂರು, ಕಲ್ಲಡ್ಕ ಸಹಿತ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಅಹಿತಕರ ಘಟನೆಯಲ್ಲಿ ಭಾಗಿಯಾಗಿ 13 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೇ , ಪೊಲೀಸರು ಅಹಿತಕರ ಘಟನೆಗೆ ಕಾರಣರಾದ ಕಿಡಿಗೇಡಿಗಳ ವಶಕ್ಕೆ ಮುಂದಾಗಿದ್ದು, ಭಾನುವಾರ ರಾತ್ರಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

* ಬಂದೋಬಸ್ತ್ ತೀವ್ರ;
ಬಂಟ್ವಾಳ, ಬಿ.ಸಿ.ರೋಡು, ಮೆಲ್ಕಾರ್, ಫರಂಗಿಪೇಟೆ, ಕಲ್ಲಡ್ಕ ಮೊದಲಾದ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಸಹಿತ ಭದ್ರತೆಯನ್ನು ಹೆಚ್ಚಿಸಲಾಗಿದೆ ಹಾಗೆಯೇ ಸಿಸಿಟಿಪಿ ಕಣ್ಗಾವಲು ಇರಿಸಲಾಗಿದೆ. ಕಳೆದ ಒಂದೂವರೆತಿಂಗಳಿನಿಂದ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು, ವಿವಿಶ ಠಾಣೆಯ ಅಧಿಕಾರಿಗಳು ಅಧಿಕಾರಿಗಳು, ಕೆಎಸ್ಆರ್ಪಿ, ಅರೆ ಸೇನಾಪಡೆಯ ಸಿಬ್ಬಂದಿಗಳು ಬಿ.ಸಿ.ರೋಡು, ಬಂಟ್ವಾಳ, ಕಲ್ಲಡ್ಕ ಪರಿಸರದಲ್ಲಿ ಬೀಡುಬಿಟ್ಟಿದ್ದಾರೆ. ಬಂಟ್ವಾಳ ನಗರ ಠಾಣೆಯಿಂದಲೇ ಅವರ ಊಟ ಉಪಚಾರ ಹಾಗೂ ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಗಲು ರಾತ್ರಿಎನ್ನದೆ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದು, ಇಂದಿನವರೆಗೆ(ಜು.11) ಜಾರಿಯಲ್ಲಿದ್ದ ನಿಷೇಧಾಜ್ಞೆ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.
ಶರತ್ ಹತ್ಯೆ ಗೆ ಸಂಬಂಧಿಸಿ ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಂಡಿದೆ. ಘಟನಾ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ಬಿಟ್ಟು ಹೋಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಆರೋಪಿಗಳ ಪತ್ತೆಕಾರ್ಯ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಪೊಲೀಸರ ಆರು ತಂಡಗಳು ವಿವಿಧ ರೀತಿಯಲ್ಲಿ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
*ಮುಖಂಡರ ವಿರುದ್ದ ಕೇಸು;
ಶವಯಾತ್ರೆ ಸಂದರ್ಭದಲ್ಲಿ ಮೆರವಣಿಗೆಯಲ್ಲಿದ್ದ ಐದು ಮಂದಿ ಹಿಂದೂ ಸಂಘಟನೆಯ ಮುಖಂಡರ ವಿರುದ್ದ ಪೊಲೀಸ್ ಇಲಾಖೆ ಕೊಲೆಯತ್ನ ಪ್ರಕರಣ ದಾಖಲಿಸಿರುವುದು ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದ ಹಿಂದೂ ಸಂಘಟನೆಯ ಪ್ರಮುಖರಾದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ವೆಲ್, ಮುರಳೀಕೃಷ್ಣ ಹಸಂತಡ್ಕ, ಹರೀಶ್ ಪೂಂಜ, ಪ್ರದೀಪ್ ಪಂಪ್ವೆಲ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಿಸಿದ್ದು, ಶವಯಾತ್ರೆ ಸಂದರ್ಭ ಕಲ್ಲುತೂರಾಟಕ್ಕೆ ಪ್ರಚೋದಿಸಿದ್ದಾರೆಂಬುದು ಪೊಲೀಸರ ಆರೋಪ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಅಹಿತಕರ ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರ ಸೂಚನೆ ಮೇರೆಗೆ ರಸ್ತೆಯಲ್ಲಿದ್ದ ಎಲ್ಲರನ್ನೂ ಸತ್ಯಜಿತ್ ಸುರತ್ಕಲ್ ಅವರು ಮನೆಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದರು. ಉಳಿದವರು ಶವಯಾತ್ರೆಯ ಮೆರವಣಿಗೆಯಲ್ಲೇ ಮೆಲ್ಕಾರ್ ನತ್ತ ತೆರಳಿದ್ದರು. ಆದರೆ ಇದೀಗ ಅವರ ಮೇಲೆ ಪ್ರಕರಣ ದಾಖಲಾಗಿರುವುದು ಹಿಂದೂ ಸಂಘಟನೆಗಳ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸಮಾಡಿಕೊಟ್ಟಿದೆ.
