ಬಂಟ್ವಾಳ: ಅಧಿಕಾರಿಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಗಿರೀಶ್ ಕೆ.ಪಿ.ಯವರು ಕೂಡ ತನ್ನ ಕಾರ್ಯದಕ್ಷತೆಯಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಜಿ.ಪಂ.ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಸೇವಾ ನಿವೃತ್ತಿಯ ಹಿನ್ನಲೆಯಲ್ಲಿ ಶುಕ್ರವಾರ ಬಿ.ಸಿ.ರೋಡಿನ ಎಸ್ಜೆಎಸ್ಆರ್ವೈ ಸಭಾಂಗಣದಲ್ಲಿ ನಡೆದ ವಿದಾಯಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಿಗಳನ್ನು ಅವರ ಕಾರ್ಯದಿಂದ ಗುರುತಿಸಬೇಕು. ಸರಕಾರಿ ನೌಕರನಿಗೆ ನಿವೃತ್ತಿ ಸಹಜವಾಗಿದ್ದರೂ ಅವರು ಸೇವಾ ಅವಧಿಯಲ್ಲಿ ನಿರ್ವಹಿಸಿದ ಕರ್ತವ್ಯ ಅವರ ಬದುಕಿಗೆ ಅರ್ಥ ನೀಡುತ್ತದೆ ಎಂದರು. ನಿವೃತ್ತಿ ಹೊಂದಿದ ಗಿರೀಶ್ ಕೆ.ಪಿ. ಅವರನ್ನು ಸನ್ಮಾನಿಸಲಾಯಿತು. ಸೇವಾ ಅವಧಿಯಲ್ಲಿನ ನೆನಪುಗಳನ್ನು ಬಿಚ್ಚಿಟ್ಟ ಅವರು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ.ಕಾರ್ಯನಿರ್ವಹಣಧಿಕಾರಿ ಸಿಪ್ರಿಯಾನ್ ಮಿರಾಂಡ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಎಂಜಿನಿಯರ್ಗಳಾದ ರವೀಂದ್ರ ಕಿಣಿ, ಟಿ.ಆರ್. ನಾಯಕ್ ವೇದಿಕೆಯಲ್ಲಿದ್ದರು. ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಜಿಲ್ಲಾ ಉಸ್ತುವಾರಿ ಸಚಿವ ಆಪ್ತ ಸಹಾಯಕ ಚಂದ್ರಶೇಖರ ಪಾತೂರು, ಪಿಡಬ್ಲ್ಯೂಡಿ ಎಂಜಿನಿಯರ್ ಉಮೇಶ್ ಭಟ್ ಎಂಜಿನಿಯರ್ಗಳಾದ ಕೃಷ್ಣ ಮಾನಪ್ಪ, ಅಜಿತ್ ಕೆ.ಎನ್, ಪದ್ಮರಾಜ್ ಗೌಡ, ಜಗದೀಶ್ ಚಂದ್ರ ಮತ್ತಿತರರು ಹಾಜರಿದ್ದರು.ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಡಬ್ಲ್ಯುಈ ಜಿ. ನರೇಂದ್ರ ಬಾಬು ಸ್ವಾಗತಿಸಿದರು, ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
