ಬಂಟ್ವಾಳ: ಬಿ. ಮೂಡ ಗ್ರಾಮದ ಪರಾರಿ ಎಸ್‍ಸಿ ಎಸ್‍ಟಿ ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಇನ್ನೂ ಅಭಿವೃದ್ದಿ ಪಡಿಸದಿರುವ ಬಗ್ಗೆ ಸ್ಥಳೀಯ ನಿವಾಸಿ ಗಂಗಾಧರ ಪುರಸಭಾ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದಲ್ಲದೆ ಸಭೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಬುಧವಾರ ಬಂಟ್ವಾಳ ಪುರಸಭೆಯಲ್ಲಿ ನಡೆದ ಎಸ್‍ಸಿ ಎಸ್‍ಟಿ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ದಾಖಲಾಯಿತು.KAR_6316

ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಸಭೆ ಅರಂಭ ವಾಗುತ್ತಿದ್ದಂತೆ ವಿಷಯ ಪ್ರಸ್ತಾವಿಸಿದ ಗಂಗಾಧರ್ ಪ್ರತಿ ಎಸ್‍ಸಿ ಎಸ್ಟಿ ಸಭೆಯಲ್ಲಿ ಪದೇ ಪದೇ ಚರ್ಚೆಗೆ ಬರುತ್ತಿದ್ದರೂ ರಸ್ತೆ ಮಾತ್ರ ಅಭಿವೃದ್ಧಿ ಪಡಿಸಲಾಗಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಇದಕ್ಕೆ ಧ್ವನಿಗೂಡಿಸಿದ ವಿಶ್ವನಾಥ ಚಂಡ್ತಿಮಾರ್ ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು. ಅಧ್ಯಕ್ಷ ರಾಮಕೃಷ್ಣ ಆಳ್ವ ಪ್ರತಿಕ್ರಿಯಿಸಿ ಮುಂದಿನ ಸಭೆಯೊಳಗೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

24.10 ಅನುದಾನದಡಿ ಪುರಸಭಾ ವ್ಯಾಪ್ತಿಯ ಪ.ಜಾತಿ ಪಂಗಡದ ಹಾಸ್ಟೆಲುಗಳಿಗೆ ಕಪಾಟು ವಿತರಿಸುವ ಕಾರ್ಯಕ್ರಮಕ್ಕೆ ಅದೇ ಸಮುದಾಯದ ನನ್ನನ್ನು ಕರೆಯದೆ ಅವಮಾನಿಸಲಾಗಿದೆ ಎಂದು ಸದಸ್ಯೆ ವಸಂತಿ ಚಂದಪ್ಪ ಆರೋಪಿಸಿದರು. ಈ ಸಂದರ್ಭ ಜನಾರ್ದನ ಚೆಂಡ್ತಿಮಾರ್ ಮಾತನಾಡಿ ಎಸ್‍ಸಿಎಸ್‍ಟಿ ಅನುದಾನದಲ್ಲಿ ಹಾಸ್ಟೆಲುಗಳಿಗೆ ಕಪಾಟು ಯಾಕೆ ನೀಡುತ್ತೀರಿ ಇದನ್ನು ಜನರಲ್ ಫಂಡಿನಲ್ಲಿ ನೀಡಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಪುರಸಭೆಯ ವತಿಯಿಂದ ಒಂದು ವಸತಿ ಶಾಲೆಯನ್ನು ದತ್ತು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ಮೆಲ್ಕಾರ್ ವೃತ್ತಕ್ಕೆ ಡಾ. ಬಿ.ಆರ್. ಅಂಬೇಡರ್ ಹೆಸರನ್ನು ಇಡುವ ಬಗ್ಗೆ ರಾಜಾ ಪಲ್ಲಮಜಲು ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸುಧಾಕರ್ ಮೆಲ್ಕಾರ್ ವೃತ್ತಕ್ಕೆ ಡಾ. ಅಮ್ಮೆಂಬಳ ಬಾಳಪ್ಪ ಹೆಸರಿಡುವ ಬಗ್ಗೆ ಈಗಾಗಲೇ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು. ಕೆಲ ಹೊತ್ತಿನ ಚರ್ಚೆಯ ಬಳಿಕ ಕೈಕಂಬ ವೃತ್ತಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಹೆಸರನ್ನು ನಾಮಕರಣಗೊಳಿಸುವ ಬಗ್ಗೆ ಪ್ರಸ್ತಾಪಿಸಲಾಯಿತು.

ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳನ್ನು ಆರಂಭವಾಗುವ ಸಂದರ್ಭವೇ ವಿದ್ಯಾರ್ಥಿ ವೇತನ ನೀಡುವಂತೆ ಪ್ರತಿಭಾ ಮಂಡಾಡಿ ಸಭೆಯಲ್ಲಿ ಸಲಹೆ ನೀಡಿದರು. ಯೋಜನ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮುಖ್ಯಾಧಿಕಾರಿ ಸುಧಾಕರ್ ಸಮುದಾಯ ಅಧಿಕಾರಿ ಮತ್ತಡಿ, ಪುರಸಭಾ ಸದಸ್ಯರಾದ ವಸಂತಿ ಚಂದಪ್ಪ, ಪ್ರವೀಣ್ ಬಿ., ಗಂಗಾಧರ, ಜೆಸಿಂತಾ, ವಾಸು ಪೂಜಾರಿ ಹಾಜರಿದ್ದರು. ವಿಶ್ವಾನಾಥ ಚೆಂಡ್ತಿಮಾರ್,ಜನಾರ್ದನ ಚೆಂಡ್ತಿಮಾರ್ ಚರ್ಚೆಯಲ್ಲಿ ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *