ಬಂಟ್ವಾಳ: ಕಲ್ಲಡ್ಕದಲ್ಲಿ ಅಹಿತಕರ ಘಟನೆಗಳು ನಡೆದ ಬಳಿಕ ನಾವು ಆತಂಕದಲ್ಲಿದ್ದೇವೆ. ಗಲಾಟೆ ನಡೆದ ಸಂದರ್ಭ ಸ್ಥಳದಲ್ಲಿ ಅನಿವಾರ್ಯವಾಗಿ ಉಳಿಯುವುದು ನಾವು ಮಾತ್ರ, ನಮಗೆ ರಕ್ಷಣೆ ನೀಡಿ ಎಂದು ಕಲ್ಲಡ್ಕದ ಹಿಂದು ವರ್ತಕರ ಸಂಘ ಮನವಿ ಮಾಡಿದೆ. ಬಿ.ಸಿ.ರೋಡ್ ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖ ಮೋನಪ್ಪ ದೇವಸ್ಯ, ನಾವು ಕಲ್ಲಡ್ಕ ಪೇಟೆಯಲ್ಲಿ ಸಣ್ಣ ದೊಡ್ಡ ಅಂಗಡಿಗಳು ಹಾಗೂ ಹೋಟೆಲ್ ಇತ್ಯಾದಿ ವ್ಯಾಪಾರ ಮಾಡಿಕೊಂಡಿರುವವರು.
ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಕಲ್ಲಡ್ಕದಲ್ಲಿ ಈವರೆಗೆ ನಡೆದ ಘಟನೆಗಳೆಲ್ಲವೂ ಕೆಲವೊಂದು ವ್ಯಕ್ತಿಗಳ ನಡುವೆ ನಡೆದ ಘಟನೆಗಳಷ್ಟೇ. ಕೋಮುದ್ವೇಷದ ಘಟನೆಗಳಲ್ಲ. ಘಟನೆ ನಡೆದ ಬಳಿಕ ದುಷ್ಕರ್ಮಿಗಳಿಂದ ಅಂಗಡಿ ಮಾಲೀಕರಿಗೆ, ಅಂಗಡಿಗೆ ತೊಂದರೆ ಆಗಿದೆ. ಅದಾದ ಬಳಿಕ ರಾಜಕೀಯ ಪ್ರೇರಿತವಾಗಿ ಕೋಮು ಗಲಭೆ ಎಂದು ಬಿಂಬಿತವಾಗಿದೆ. ಪ್ರತಿ ಬಾರಿಯೂ ಗಲಭೆಗಳಾದಾಗ ಅದರಲ್ಲಿ ಭಾಗಿಗಳಾದವರು ತಪ್ಪಿಸಿಕೊಂಡು ಅಲ್ಲಿಂದ ಹೋಗುತ್ತಾರೆ. ಬಳಿಕ ಇರುವವರು ಅಂಗಡಿ ಮಾಲೀಕರು ಮತ್ತು ಅದರಲ್ಲಿ ಕೆಲಸ ಮಾಡುವವರು ಮಾತ್ರ. ದಿಕ್ಕು ತೋಚದೆ ಹೋಗಲು ವಾಹನಗಳು ಇಲ್ಲದೆ ನಿಂತಿರುವಾಗ ಪೊಲೀಸರಿಂದ ಲಾಠಿ ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ ಸಂದರ್ಭವೂ ಇದೆ ಎಂದು ಅಳಲು ತೋಡಿಕೊಂಡರು.
ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸರಿಗೆ ಸೂಕ್ತ ನಿರ್ದೇಶಗಳಿಲ್ಲದೆ ಅಮಾಯಕರಿಗೆ ತೊಂದರೆಯಾದ ಸಂದರ್ಭವೇ ಜಾಸ್ತಿ. ಅಂಗಡಿ ಮಾಲೀಕರು ನಿಲ್ಲಿಸಿದ ವಾಹನಗಳನ್ನು ಪುಡಿಮಾಡುವುದು, ಅಂಗಡಿಗಳನ್ನು ಧ್ವಂಸಗೊಳಿಸುವುದೂ ಇದರಲ್ಲಿ ಸೇರಿದೆ. ಇಂಥ ಎಲ್ಲ ಘಟನೆ ನಡೆದಾಗ ಬಲಿಪಶುಗಳಾಗುವುದು ಅಂಗಡಿ ಮಾಲೀಕರು ಎಂದು ಹೇಳಿದ ಅವರು, ಆತಂಕದ ನಡುವೆಯೇ ವ್ಯಾಪಾರ ಮಾಡಬೇಕಾದ ದುಸ್ಥಿತಿಗೆ ಇಂದು ಕಲ್ಲಡ್ಕ ತಲುಪಿದೆ. ಅಂಗಡಿ ಮಾಲೀಕರ ನಷ್ಟದ ಹೊರೆಯನ್ನು ಸ್ವತ: ವಹಿಸಬೇಕಾಗುತ್ತದೆ. ಹೀಗಾಗಿ ಅಂಗಡಿಗಳಿಗೆ ಮತ್ತು ವಾಹನಗಳಿಗೆ ತೊಂದರೆ ಕೊಡುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಬ್ಬ ವ್ಯಾಪಾರಸ್ಥರು ತಮ್ಮ ಜೀವನ ನಿರ್ವಹಣೆಗೋಸ್ಕರ ದುಡಿಯುತ್ತಿದ್ದು, ಯಾವುದೇ ಗಲಭೆಗಳಾದಾಗ ಪೊಲೀಸರು ಅಂಗಡಿ ಮಾಲೀಕರಿಗೆ ಮತ್ತು ಅಂಗಡಿಗಳಿಗೆ ಮತ್ತು ವಾಹನಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಪೂವಪ್ಪ ಟೈಲರ್, ಯತೀನ್ ಕುಮಾರ್, ವಿಠಲ ಪ್ರಭು, ಚಂದ್ರಶೇಖರ್, ನರಸಿಂಹ ನಾಯಕ್, ಚಿತ್ತರಂಜನ್, ಶ್ರೀನಿವಾಸ, ಕರುಣಾಕರ ದಾಸ್ ಮೊದಲಾದವರು ಉಪಸ್ಥಿತರಿದ್ದರು.
