ಬಂಟ್ವಾಳ, ; ‘ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಯೋಗ ಸಹಕಾರಿಯಾಗಿದೆ. ಯೋಗವನ್ನು ತನ್ನ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾನವ ತಪ್ಪುದಾರಿಯನ್ನು ಹಿಡಿಯಲಾರ. ಒತ್ತಡ ನಿವಾರಣೆ ಹಾಗೂ ಏಕಾಗ್ರತೆಯೊಂದಿಗೆ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಯೋಗ ಅಗತ್ಯವಾಗುತ್ತದೆ. ಜನತೆಯಲ್ಲಿ ಈ ಬಗ್ಗೆ ವಿಶೇಷ ಅರಿವನ್ನು ಮೂಡಿಸುವ ಸಲುವಾಗಿ ಇಂದು ದೇಶಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ನಮ್ಮ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಲಿ’ ಎಂದು ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನ ಪ್ರಾಂಶುಪಾಲರಾದ ಡಾ|ಪಾಂಡುರಂಗ ನಾಯಕ್ ನುಡಿದರು.

ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಆಶ್ರಯದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಯೋಗ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕು. ಸ್ವಾತಿ ಹಾಗೂ ಕು. ವೇದಾ ಎಂ.ಆರ್ ಇವರುಗಳು ಪ್ರಾತ್ಯಕ್ಷ್ಷಿಕೆಯೊಂದಿಗೆ ಯೋಗದ ಮಹತ್ವವನ್ನು ವಿವರಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ನಾರಾಯಣ ಭಂಡಾರಿ ಸ್ವಾಗತಿಸಿ, ಶ್ರೀ ಕಿಟ್ಟು ರಾಮಕುಂಜ ವಂದಿಸಿದರು. ವಿದ್ಯಾರ್ಥಿನಿ ರಮ್ಯಾಕೃಷ್ಣ ಪ್ರಾರ್ಥಿಸಿ, ಎನ್.ಎಸ್.ಎಸ್ ಸ್ವಯಂ ಸೇವಕ ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿದರು.
