ಬಂಟ್ವಾಳ: ತಾಲ್ಲೂಕಿನ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹಳೆ ಆರೋಪಿಯೊಬ್ಬನಿಗೆ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ಗಾಯಾಳುವನ್ನು ಇಲ್ಲಿನ ನಿವಾಸಿ ಉಮ್ಮರ್ ಎಂಬವರ ಪುತ್ರ ಉನೈದ್ ಎಂದು ಗುರುತಿಸಲಾಗಿದ್ದು, ಈತನು ತನ್ನ ಸ್ನೇಹಿತ ಫಯಾಝ್ ಜೊತೆಗೆ ಫರಂಗಿಪೇಟೆ ಸಮೀಪದ ಅಡ್ಯಾರು ಗ್ಯಾರೇಜೊಂದರಲ್ಲಿ ಫಿಟ್ಟರ್ ಕೆಲಸ ಮುಗಿಸಿಕೊಂಡು ಮಂಗಳವಾರ ಸಂಜೆ ಎಂದಿನಂತೆ ತುಂಬೆಗೆ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕಿನಲ್ಲಿ ಬಂದಿದ್ದ ಅಪರಿಚಿತ ಯುವಕರಿಬ್ಬರ ತಂಡವು ಈ ದಾಳಿಗೆ ವಿಫಲ ಯತ್ನ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಆರೋಪಿಗಳು ಪರಾರಿಯಾಗಿದ್ದು, ಬೈಕಿಂದ ಬಿದ್ದ ಗಾಯಾಳು ಉನೈದನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಸ್ಥಳೀಯ ಹಿಂದೂ ಮಹಿಳೆಯೊಬ್ಬರ ಕೈ ಹಿಡಿದು ಎಳೆದ ಆರೋಪದಲ್ಲಿ ಉನೈದ್ ಬಂಧನಕ್ಕೀಡಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು ಎನ್ನಲಾಗಿದೆ. ಇದೇ ಪೂರ್ವದ್ವೇಷದಿಂದ ಈ ದಾಳಿ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಉಮಾರ್, ಎಸ್ಪಿ ಭೂಷಣ್ ಜಿ.ಬೊರಸೆ ಮತ್ತಿತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *