ಬಂಟ್ವಾಳ : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಿಪ್ಪಾಡಿ ಗ್ರಾಮದ ಎಲ್ಪೆಲ್ ಎಂಬಲ್ಲಿ ಮದರಸವೊಂದರ ಬಾಗಿಲು ತೆರೆದು ಒಳ ಪ್ರವೇಶಿಸಿದ ಕಿಡಿಗೇಡಿಗಳು ಪಿಠೋಪಕರಣಕ್ಕೆ ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ಎಲ್ಪೆಲ್‍ನಲ್ಲಿರುವ ಜಲಾಲಿಯಾ ಮದರಸದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಮದರಸ ಮಾವಿನ ಕಟ್ಟೆ ಬದ್ರಿಯಾ ಜುಮಾ ಮಸೀದಿಯ ಆಧೀನದಲ್ಲಿ ಕಾರ್ಯಚರಿಸುತ್ತಿದೆ. ಗುರುವಾರ ತಡ ರಾತ್ರಿ ಮದರಸದ ಒಳಗೆ ಪ್ರವೇಶಿಸಿದ ಯಾರೋ ಕಿಡಿಗೇಡಿಗಳು ಮದರಸದ ಪಿಠೋಪಕರಣಕ್ಕೆ ಬೆಂಕಿ ಹಚ್ಚಿದ್ದಾರೆ.
ಮದರಸದ ಬಾಗಿಲಿಗೆ ಚಿಲಕ ಹಾಕಿತ್ತಾದರೂ ಬೀಗ ಹಾಕಿರಲಿಲ್ಲ. ಇದರಿಂದ ಸುಲಭವಾಗಿ ಮದರಸದೊಳಗೆ ನುಗ್ಗಿದ ಕಿಡಿಗೇಡಿಗಳು ನಮಾಝ್‍ಗೆ ಬಳಸುವ ಮುಸಲ್ಲಾವನ್ನು ಡೆಸ್ಕ್‍ನ ಮೇಲಿಟ್ಟು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಲು ಸೀಮೆ ಎಣ್ಣೆ ತಂದಿರುವುದು ಬಾಟಲಿ ಸ್ಥಳದಲ್ಲಿ ಪತ್ತೆಯಾಗಿದೆ. ಬೆಂಕಿಯಿಂದ ಡೆಸ್ಕ್ ಮತ್ತು ಕಿಟಕಿಯ ಬಾಗಿಲುಗಳು ಸ್ವಲ್ಪ ಪ್ರಮಾಣದಲ್ಲಿ ಸುಟ್ಟು ಹೋಗಿದೆ. ಈ ಬಗ್ಗೆ ಮಾವಿನ ಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೂಷಣ್ ಜಿ ಬೊರಸೆ,ಡಿವೈಎಸ್ಪಿ ರವೀಶ್, ಬೆಳ್ತಂಗಡಿವೃತ್ತ ನಿರೀಕ್ಷಕ ಆರ್.ನಾಗೇಶ್, ಎಸೈ ಚಂದ್ರಶೇಖರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
