ಬಂಟ್ವಾಳ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿಇಟಿ ತರಬೇತಿ ಸಹಿತ ವಿವಿಧ ಕೋಚಿಂಗ್ ಸೆಂಟರ್ ಗಳಿವೆ. ಅಂತೆಯೇ ಐಎಎಸ್, ಕೆಎಎಸ್ ಕೋಚಿಂಗ್ ಸೆಂಟರ್ ಗಳ ಅವಶ್ಯಕತೆ ಇದೆ ಎಂದು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 37ನೇ ಸ್ಥಾನ ಪಡೆದ ಬಂಟ್ವಾಳದ ನವೀನ್ ಭಟ್ ಹೇಳಿದ್ದಾರೆ.ಸಿವಿಲ್ ಸರ್ವೀಸ್ ಪರೀಕ್ಷೆ ತೇರ್ಗಡೆ ಹೊಂದಿದ ಬಳಿಕ ಬೆಂಗಳೂರಿನಿಂದ ಆಗಮಿಸಿದ ನವೀನ್ ಭಟ್, ತನ್ನ ಬಂಟ್ವಾಳದ ಮನೆಗೆ ಬಂದ ಬಳಿಕ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿ, ಪರೀಕ್ಷೆಯ ಅನುಭವಗಳನ್ನು ಹಂಚಿಕೊಂಡರು.
ನವೀನ್ ಭಟ್ ಅವರು ಬಂಟ್ವಾಳದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರ.ನಿಯಮಿತವಾದ ಓದು, ಸಮಕಾಲೀನ ವಿದ್ಯಮಾನಗಳ ಅರಿವು, ಪ್ರತಿಯೊಂದು ವಿಷಯಗಳ ಕಡೆಗಿನ ಆಸಕ್ತಿ, ಜನಸಾಮಾನ್ಯರೊಂದಿಗೆ ಬೆರೆಯುವುದನ್ನು ನಾವು ಮಾಡಿದರೆ ಸಿವಿಲ್ ಸರ್ವೀಸ್ ಗೆ ಸೇರುವ ಆಸಕ್ತಿಯೂ ಮೂಡುತ್ತದೆ. ಇಂತಹ ವಾತಾವರಣ ಜಿಲ್ಲೆಯ ಮೂಡಬೇಕಿದೆ ಎಂದವರು ಅಭಿಪ್ರಾಯಿಸಿದರು. ವೈದ್ಯನಾಗುವುದೂ ಜನಸೇವೆಗೆ. ಐಎಎಸ್ ಅಧಿಕಾರಿಯಾಗುವುದೂ ಜನಸೇವೆಗೆ. ಅವುಗಳಲ್ಲಿ ಸಿವಿಲ್ ಸರ್ವೀಸ್ ಗೆ ಸೇರಿದರೆ ಹೆಚ್ಚು ಜನರ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಇದನ್ನು ಆಯ್ಕೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನಸಾಮಾನ್ಯರ ನಡುವೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುವ ಅವಕಾಶ ದೊರಕಿತು.
* ತಂದೆಯೇ ರೋಲ್ ಮಾಡೆಲ್
ನನಗೆ ನನ್ನ ತಂದೆಯವರೇ ರೋಲ್ ಮಾಡೆಲ್. ಅವರು ಜನರೊಂದಿಗೆ ಸ್ಪಂದಿಸುವ ಪರಿ, ಕೆಲಸದ ಬಗ್ಗೆ ಹೊಂದಿರುವ ಶ್ರದ್ಧೆ ನನಗೆ ಸಿವಿಲ್ ಸರ್ವೀಸ್ ಕಡೆಗೆ ಹೆಚ್ಚು ಆಸಕ್ತಿ ಮೂಡುವಂತೆ ಮಾಡಿತು. ಎಂಬಿಬಿಎಸ್ ಕಲಿಕೆಗೆ ಸೇರಿದಾಗಲೇ ಇದಕ್ಕೆ ತಯಾರಿಗಳನ್ನು ಮಾಡಿಕೊಂಡೆ, ಇದಕ್ಕೆ ಅವರ ಪ್ರೋತ್ಸಾಹವೂ ಕಾರಣ, ತಂದೆಯ ಕಾರ್ಯವೈಖರಿಯ ಬಗ್ಗೆ ತಾಯಿ ಆಗಾಗ್ಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನವೀನ್ ಭಟ್ ಸ್ಮರಸಿಕೊಂಡರು.
ನಾನು ಪಾಸ್ ಆಗುತ್ತೇನೆ ಎಂಬ ಆತ್ಮವಿಶ್ವಾಸ ಇರಲೇಬೇಕು. ಇದರ ಜೊತೆಗೆ ಮಾರ್ಗದರ್ಶನವೂ ಸೂಕ್ತ ಕ್ರಮದಲ್ಲಿ ದೊರಕಬೇಕು. ನಾನು ದಿನಕ್ಕೆ ಐದರಿಂದ ಆರು ಗಂಟೆ ಓದುತ್ತಿದ್ದೆ. ಇದರ ತಯಾರಿ ಮಾಡುವುದು ಎಂದರೆ ಕಣ್ರೆಪ್ಪೆ ಮುಚ್ಚದೆ ಓದುತ್ತಾ ಇರುವುದಲ್ಲ. ಸಹಜವಾಗಿಯೇ ಇದ್ದು, ವಿಷಯಗಳ ಬಗ್ಗೆ ಮನಮುಟ್ಟುವಂತೆ ಅಧ್ಯಯನ ಕೈಗೊಳ್ಳುವುದು ಹಾಗೂ ಗುಂಪು ಚರ್ಚೆಯಂಥ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಜ್ಞಾನಸಂಪಾದನೆ ಸಾಧ್ಯ ಎಂದು ತನ್ನ ಅನುಭವ ಹಂಚಿಕೊಂಡ ಅವರು , ಈ ಗಿನ ವಿದ್ಯಾರ್ಥಿಗಳು ಆರನೇ ತರಗತಿಯಿಂದಲೇ ಈ ಕೆಲಸವನ್ನು ನಾವು ಮಾಡಬಹುದು ಎಂದು ನವೀನ್ ಸಲಹೆ ನೀಡಿದರು.
* ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ
ಇದೇ ವೇಳೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಆಯ್ಕೆಗೊಂಡ ನವೀನ್ ಭಟ್ ಅವರನ್ನು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕೋಶಾಧಿಕಾರಿ ವೆಂಕಟೇಶ ಬಂಟ್ವಾಳ, ಹರೀಶ ಮಾಂಬಾಡಿ, ಸಂದೀಪ್ ಸಾಲ್ಯಾನ್, ಕಿಶೋರ್ ಪೆರಾಜೆ, ಇಮ್ತಿಯಾಜ್ ಶಾ, ಚಂದ್ರಶೇಖರ ಕಲ್ಮಲೆ , ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
