ವಾಮದಪದವು:ಕಳೆದ 4 ವರ್ಷಗಳ ಹಿಂದೆ ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ಮದ್ಯದ ದೊರೆ ವಿಜಯ ಮಲ್ಯ ಅವರು ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಕಲ್ಲಕೊಡಂಗೆ ಎಂಬಲ್ಲಿ ತನ್ನ ಕುಟುಂಬಿಕರು ಆರಾಧಿಸುತ್ತಿದ್ದ ಮೂಲ ನಾಗಬನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಭಾರೀ ವಿಲಾಸಿ ಬದುಕಿನ ಅಪರೂಪ ವ್ಯಕ್ತಿತ್ವದ ವಿಜಯ ಮಲ್ಯ ಅವರು ಸುಮಾರು 8 ಸಾವಿರ ಕೋಟಿ ಕೋಟಿ ಮೊತ್ತದ ಸಾಲದ ಹೊರೆ ಹಿನ್ನೆಲೆಯಲ್ಲಿ ದೇಶ ಬಿಟ್ಟು ಲಂಡನ್ನಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವುದು ಜಗಜ್ಜಾಹೀರಾಗಿದೆ.
ಇದರಿಂದಾಗಿ ಕಳೆದ 10 ವರ್ಷಗಳ ಹಿಂದೆಯಷ್ಟೇ ಇವರ ಕುಟುಂಬಿಕರು ಪುನರ್ ನಿರ್ಮಿಸಿದ್ದ ಇಲ್ಲಿನ ಕಲ್ಲಕೊಡಂಗೆ ನಾಗಬನಕ್ಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಮಲ್ಯರು ಭೇಟಿ ನೀಡಿದ್ದರು. ಅವರು ತೀರಾ ಆರ್ಥಿಕ ಸಂಕಷ್ಟಕ್ಕೀಡಾದ ವೇಳೆ ಜ್ಯೋತಿಷ್ಯರೊಬ್ಬರ ಸಲಹೆಯಂತೆ ಸದ್ದಿಲ್ಲದೆ ಇಲ್ಲಿಗೆ ಸಮೀಪದ ಅಜ್ಜಿಬೆಟ್ಟು ಎಂಬಲ್ಲಿಗೆ ಹೆಲಿಕಾಪ್ಟರ್ ಮೂಲಕ ಬಂದು ನಾಗಬನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಿರುವುದನ್ನು ಸ್ಥಳೀಯರು ಇದೀಗ ನೆನಪಿಸಿಕೊಳ್ಳುತ್ತಿದ್ದಾರೆ.

ಹಿನ್ನೆಲೆ:
ಈ ಹಿಂದೆ ಇಲ್ಲಿನ ಸುಮಾರು ಏಳು ಎಕರೆ ಜಮೀನು ಮಲ್ಯರ ಕುಟುಂಬಿಕರಾದ ಅನುಷಾ ಭಾಯಿ ಎಂಬವರಿಗೆ ಸೇರಿದ್ದು, ಬಳಿಕ ಭೂಮಸೂದೆ ಕಾಯ್ದೆ ಮೂಲಕ ಈ ಜಮೀನು ಇಲ್ಲಿನ ಕೃಷಿಕ ದಿವಂಗತ ಬಿರ್ಮಣ್ಣ ಶೆಟ್ಟಿ ಎಂಬವರಿಗೆ ದೊರೆತಿದೆ. ಆದರೆ ಇಲ್ಲಿನ ಬೃಹತ್ ಗಾತ್ರದ ನಾಗಬನ ಮತ್ತು ದೈವಸ್ಥಾನ ಮಾತ್ರ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಈ ವಿಷಯ ಅರಿತ ಮಲ್ಯರ ಕುಟುಂಬಿಕರು ನಾಗಬನ ಅಭಿವೃದ್ಧಿಪಡಿಸಿ ಮರದಡಿ ದೊರೆತ ನಾಗನ ವಿಗ್ರಹ ಪ್ರತಿಷ್ಠಾಪಿಸಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಮಲ್ಯರು ಭೇಟಿ ನೀಡಿದ ಬಳಿಕ ಪ್ರತೀ ವರ್ಷ ನಾಗನಿಗೆ ಆಶ್ಲೇಷಾ ಪೂಜೆ ನಡೆಯುತ್ತಿದ್ದು, ಈ ಬಾರಿ ಮಾತ್ರ ನಡೆದಿಲ್ಲ. ಇನ್ನೊಂದೆಡೆ ಅಂದು ನಡೆದ ನಾಗನ ಪ್ರತಿಷ್ಠೆ ವೇಳೆ ಸಿಗದ ಅಪರೂಪದ ನಾಗನ ಕೆತ್ತನೆ ಹೊಂದಿರುವ ವಿಗ್ರಹವೊಂದು ಇದೀಗ ಮರದ ಬೇರಿನಡಿ ಸ್ಥಳೀಯರಿಗೆ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಇದೇ ಜಮೀನಿನಲ್ಲಿ ಅಣ್ಣಪ್ಪ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳಿಗೂ ಪ್ರತ್ಯೇಕ ದೈವಸ್ಥಾನ ಮತ್ತು ಪಿಲಿಚಾಮುಂಡಿ ಕಟ್ಟೆ ನಿರ್ಮಿಸಲಾಗಿದ್ದು, ಪ್ರತೀ ವರ್ಷ ನೇಮ ನಡೆಯುತ್ತಿದೆ. ಇಲ್ಲಿನ ಕೃಷಿಕ ದಿವಂಗತ ಬಿರ್ಮಣ್ಣ ಶೆಟ್ಟರ ಮಕ್ಕಳು ನಿರ್ಮಿಸಿದ ದೈವಸ್ಥಾನ ನಿರ್ಮಾಣ ಕಾಮಗಾರಿಗೆ ಮಲ್ಯರ ಕುಟುಂಬಿಕರು ಆರ್ಥಿಕ ನೆರವು ನೀಡಿರುವುದನ್ನು ಸ್ಮರಿಸುತ್ತಿದ್ದಾರೆ. ಈ ನಡುವೆ ಮಲ್ಯರ ತಂದೆ-ತಾಯಿ ನೆಲೆಸಿದ್ದ ಬಂಟ್ವಾಳ ಪೇಟೆಯ ಒಡೆಯ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಳದ ಬಾಗಿಲಿಗೆ ಚಿನ್ನದ ಲೇಪನದಿಂದ ಮುಚ್ಚುವ ಬಗ್ಗೆ ನೀಡಿದ್ದ ಭರವಸೆಯೂ ಈಡೇರಿಸಲು ಅವರಿಗೆ ಸಾಧ್ಯವಾಗಿಲ್ಲ ಎಂಬುದು ಇಲ್ಲಿನ ಭಕ್ತರು ಅನಿಸಿಕೆ.
ಒಟ್ಟಿನಲ್ಲಿ ವಿಜಯ ಮಲ್ಯರು ಕಲ್ಲಕೊಡಂಗೆ ಮೂಲ ನಾಗಬನಕ್ಕೆ ಮತ್ತೆ ಭೇಟಿ ನೀಡಿ ಪೂಜೆ ಸಲ್ಲಿಸಿದಾಗ ಮಾತ್ರ ಅವರಿಗೆ ಎದುರಾದ ಎಲ್ಲಾ ಸಂಕಷ್ಟವೂ ನಿವಾರಣೆಯಾಗುತ್ತದೆ ಎಂದು ಇಲ್ಲಿನ ಹಿರಿಯ ಕೃಷಿಕ ದೂಮಣ್ಣ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
