ಬಂಟ್ವಾಳ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿರುವ ಹಿನ್ನಲೆಯಲ್ಲಿ ಬ್ಯಾಂಕುಗಳು ಬಲವಂತದ ಸಾಲ ವಸೂಲಾತಿಯನ್ನು ವಿರೋಧಿಸಿ ಸೋಮವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ ಅಂಗೀಕರಿಸಲಾಯಿತು. ಸದಸ್ಯ ಉಸ್ಮಾನ್ ಕರೋಪಾಡಿಯವರು ವಿಷಯ ಪ್ರಸ್ತಾವಿಸಿ ಬಂಟ್ವಾಳ ತಾಲೂಕನ್ನು ಸರಕಾರ ಬರಪೀಡಿತ ತಾಲೂಕೆಂದು ಘೋಷಿಸಿ ಪ್ರಯೋಜನವೇನು, ಇತ್ತ ಕೃಷಿ ಸಂಪೂರ್ಣ ಬತ್ತಿ ಹೋಗಿದ್ದು ಮತ್ತೊಂದೆಡೆ ಮುಖ್ಯಮಂತ್ರಿಯವರು ರೈತರಿಂದ ಸಾಲ ವಸೂಲಾತಿ ಮಾಡಬಾರದೆಂದು ಹೇಳುತ್ತಲೇ ಇದ್ದಾರೆ. ಆದರೆ ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ಜಾರಿಗೊಳಿಸಿ ಕಿರುಕುಳ ನೀಡುತ್ತಿದ್ದಾರೆ. ಬರ ಎನ್ನುವುದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುವುದೇ,ರೈತರಿಗೆ ಬರ ಹಿನ್ನೆಲೆಯಲ್ಲಿ ಪರಿಹಾರ ಇದೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭ ಧ್ವನಿಗೂಡಿಸಿದ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ನೀಡುವುದನ್ನು ಆಕ್ಷೇಪಿಸಿದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆದು ಕೊನೆಗೆ ಬಲವಂತದ ಸಾಲ ವಸೂಲಾತಿ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.

KAR_1912 (1)
*ಖಾಸಗಿ ಕೊಳವೆ ಬಾವಿಯೂ ಗ್ರಾಪಂಗೆ
ತುರ್ತು ಸಂದರ್ಭ ಬಂದರೆ ಖಾಸಗಿ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯತ್ ಗಳು ಉಪಯೋಗಿಸಬಹುದು ಎಂದು ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸಿಪ್ರಿಯನ್ ಮಿರಾಂದ ಹೇಳಿದರು. ಗ್ರಾಪಂಗಳಲ್ಲಿ ಇರುವ ಬೋರ್ ವೆಲ್ ಬತ್ತಿ ಹೋಗಿದೆ, ತುರ್ತು ಅವಶ್ಯಕತೆ ಇರುವ ಕಾರಣ ಹೊಸದಾಗಿ ಬೋರ್ ವೆಲ್ ತೋಡಲು ಅನುಮತಿ ನೀಡಬೇಕು ಎಂದು ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೋರಿದ ಮನವಿಗೆ ಉತ್ತರಿಸಿದ ಅವರು, ನೀರು ಮಿತವ್ಯಯ ಬಳಕೆಗೆ ಆದ್ಯತೆ ನೀಡಬೇಕು. ಬೋರ್ ವೆಲ್ ತೋಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದರಲ್ಲದೆ, ಪಂಚಾಯತ್‍ನ ಸಂಪನ್ಮೂಲಗಳಿಂದ ಪ್ರಸ್ತುತ ರಸ್ತೆ ಚರಂಡಿ ಕಾಮಗಾರಿಯನ್ನು ಹೊರತು ಪಡಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಶಾಸಕರ ಟಾಸ್ಕ್ ಫೋರ್ಸ್ ನಿಂದ   ಈಗಾಗಲೇ ಹಣ ಬಿಡುಗಡೆ ಆಗಿದೆ. ಕೊಳವೆಬಾವಿ ತೋಡುವುದನ್ನು ಕಡಿಮೆ ಮಾಡಿ, ನೈಸರ್ಗಿಕ ಮೂಲಗಳಿಗೆ ಹೆಚ್ಚು ಆದ್ಯತೆ ನೀಡಿ, ಕಿಂಡಿ ಅಣೆಕಟ್ಟು ರಚನೆ ಕುರಿತು ಗಮನ ಕೊಡಿ ಎಂದು ಹೇಳಿದ ಇಒ, ತುರ್ತು ಸಂದರ್ಭ ಬೇಕಾದರೆ ಗ್ರಾಪಂಗಳು ತಾಪಂ ಸಂಪರ್ಕಿಸಲು ಕೋರಿದರು.
*ನಗರಸಭೆಗೆ ಪಂಚಾಯತ್ ವಿರೋಧ…
ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರುವ ಸಂದರ್ಭ, ಹತ್ತಿರದ ಗ್ರಾಮ ಪಂಚಾಯತ್‍ಗಳ ಕೆಲ ಭಾಗಗಳನ್ನು ಸೇರ್ಪಡೆಗೊಳಿಸುವುದಕ್ಕೆ ಗ್ರಾಪಂಗಳು ಹಾಗೂ ಆ ಭಾಗಗಳಿಗೆ ಸೇರಿದ ತಾಲೂಕು ಪಂಚಾಯತ್ ಸದಸ್ಯರು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಬಂಟ್ವಾಳ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರುವ ಸಂದರ್ಭ ಗ್ರಾಮಗಳ ಭೂಭಾಗ ಸೇರ್ಪಡೆ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು ಎಂದು ತಾಪಂ ಸದಸ್ಯರಲ್ಲಿ ಕೋರಿದರು. ಅಮ್ಟಾಡಿ, ನರಿಕೊಂಬು, ಪಂಜಿಕಲ್ಲು, ಮೂಡುನಡುಗೋಡು, ಗೋಳ್ತಮಜಲು ಹಾಗೂ ನಾವೂರು ಗ್ರಾಮಗಳ ಕೆಲ ಭಾಗಗಳು ಸೇರ್ಪಡೆಯಾಗುತ್ತಿವೆ ಎಂಬ ಮಾಹಿತಿಯನ್ನು ಇಒ ನೀಡಿದರು.
ಈ ಸಂದರ್ಭ ಮಾತನಾಡಿದ ಅಮ್ಟಾಡಿ ತಾಪಂ ಸದಸ್ಯೆ ಮಲ್ಲಿಕಾ ವಿ. ಶೆಟ್ಟಿ ಪುರಸಭೆ ಈ ಕುರಿತು ಗ್ರಾಮದ ಜನರ ವಿಶ್ವಾಸವನ್ನು ತೆಗೆದುಕೊಳ್ಳದೆ ಏಕಾಏಕಿ ಸೇರ್ಪಡೆ ನಡೆಸುವುದು ಸರಿಯಲ್ಲ. ಎರಡು ದಿನಗಳ ಮೊದಲು ನೋಟಿಸ್ ನೀಡಿ, ಗ್ರಾಪಂನಲ್ಲಿ ವಿಶೇಷ ಸಭೆ ಕರೆದರೆ ಅಲ್ಲಿಗೆ ಗ್ರಾಮಸ್ಥರು ಬರುವುದಾದರೂ ಹೇಗೆ ಎಂದರು. ಇದಕ್ಕೆ ದನಿಗೂಡಿಸಿದ ಪಂಜಿಕಲ್ಲು ತಾಪಂ ಸದಸ್ಯೆ ಪದ್ಮಾವತಿ ಬಿ.ಪೂಜಾರಿ ಹಾಗೂ ನರಿಕೊಂಬು ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಫಲ್ಯ, ತಮ್ಮ ವಿರೋಧವಿರುವುದಾಗಿ ಸ್ಪಷ್ಟಪಡಿಸಿದರು. ದನಿಗೂಡಿಸಿದ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಂಟ್ವಾಳದ ಪ್ರಸ್ತಾವಿತ ನಗರಸಭೆಗೆ ನರಿಕೊಂಬು ಗ್ರಾಮಕ್ಕೆ ಆದಾಯ ಬರುವ ಭಾಗಗಳೇ ಸೇರ್ಪಡೆಯಾಗುತ್ತದೆ. ಹೀಗಾದರೆ ಬಳಿಕ ನರಿಕೊಂಬು ಕುಗ್ರಾಮವಾಗಿ ಮಾರ್ಪಾಡಾಗುವ ಸಂಭವ ಇದೆ. ಈ ರೀತಿಯ ಧೋರಣೆ ಸರಿಯಲ್ಲ, ಪುರಸಭೆ ಸೇರ್ಪಡೆ ವಿಚಾರದಲ್ಲಿ ಸರಿಯಾದ ಕ್ರಮವನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಉಸ್ಮಾನ್ ಕರೋಪಾಡಿ ಮತ್ತು ರಮೇಶ್ ಕುಡುಮೇರು ಈ ಕುರಿತು ಪುರಸಭೆ ಸದಸ್ಯರಿಗೆ ಸ್ಪಷ್ಟ ಚಿತ್ರಣವನ್ನು ನೀಡಬೇಕು ಎಂದು ಒತ್ತಾಯಿಸಿದರೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ವಿರೋಧ ವ್ಯಕ್ತಪಡಿಸುವ ಬದಲು ನಗರಸಭೆ ಆಗುವುದರಿಂದ ಆಗುವ ಲಾಭ ನಷ್ಟಗಳನ್ನು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿ ಚರ್ಚಿಸುವುದೊಳಿತು ಎಂದು ಸಲಹೆ ನೀಡಿದರು.

*ಪುಣಚ ಪರಿಸರದಲ್ಲಿ ಡೆಂಘೆ, ಮಲೇರಿಯಾ…
ಪುಣಚ ಪರಿಸರದದಲ್ಲಿ ಡೆಂಘೆ, ಮಲೇರಿಯಾ, ಇಲಿಜ್ವರದ ಕಾಟ ಇದೆ ಎಂದು ಗ್ರಾಪಂ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಹೇಳಿದರು.
ಈ ಸಂದರ್ಭ ಉತ್ತರಿಸಿದ ಆರೋಗ್ಯಾಧಿಕಾರಿ ದೀಪಾ ಪ್ರಭು, ಐವರಿಗೆ ಡೆಂಘೆ ಪಾಸಿಟಿವ್ ಬಂದಿದ್ದು, ಅವರು ಗುಣಮುಖರಾಗುತ್ತಿದ್ದಾರೆ. ಫಾಗಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ರೋಗ ಹರಡದಂತೆ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು. ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ದೀಪಾ ಪ್ರಭು ಮನವಿ ಮಾಡಿದರು.
*ಖಾಸಗಿ ಬಸ್ ತಂಗುದಾಣ…
ಬಂಟ್ವಾಳ ತಾಲೂಕಿನ ಹೃದಯಭಾಗ ಬಿ.ಸಿ.ರೋಡ್ ನಲ್ಲಿರುವ ತಾಪಂನ ಹಳೇ ಕಟ್ಟಡವನ್ನು ಕೆಡಹಿ, ಅಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಮಾಡುವ ಪ್ರಸ್ತಾಪವಿದೆ ಎಂದು ಇಒ ಸಿಪ್ರಿಯನ್ ಮಿರಾಂದಾ ಸಭೆಯ ಗಮನಕ್ಕೆ ತಂದರು.
ಅಧಿಕಾರಿಗಳ ಗೈರು..
ಸಾಮಾನ್ಯ ಸಭಗೆ ಅಧಿಕಾರಿಗಳು ಗೈರುಹಾಜರಾಗುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಉಸ್ಮಾನ್, ಎಲ್ಲರ ಅಟೆಂಡೆನ್ಸ್ ತೆಗೆಯಬೇಕು ಎಂದು ಒತ್ತಾಯಿಸಿದ ಬಳಿಕ ಎಲ್ಲರ ಹೆಸರು ಕೂಗಿ ಬಂದಿದ್ದಾರೋ ಇಲ್ಲವೋ ಎಂದು ಗೊತ್ತುಪಡಿಸಲಾಯಿತು.
*ತಾ.ಪಂ.ನಲ್ಲಿ ಬೀಟ್ ಪೊಲೀಸ್ ಚರ್ಚೆ…
ರಾಜ್ಯದಲ್ಲಿ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಹಳ್ಳಿಗೊಬ್ಬ ಬೀಟ್ ಪೊಲೀಸ್ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆಯಿತು. ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರ ಕೋರಿಕೆಯಂತೆ ನಗರ ಠಾಣಾಧಿಕಾರಿ ರಕ್ಷಿತ್ ಅವರು ಈ ಹೊಸ ವ್ಯವಸ್ಥೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಜನರ ಮತ್ತು ಪೊಲೀಸರ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಜನಸ್ನೇಹಿ ಪೊಲೀಸರನ್ನಾಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ಸೇರಿಸಿ 50 ಮಂದಿಯ ಸಮಿತಿಯನ್ನು ರಚಿಸಲಾಗುತ್ತಿದೆ. ಇದಕ್ಕೆ ಓರ್ವ ಕಾರ್ನಸ್ಟೇಬಲ್‍ರವರನ್ನು ಮುಖ್ಯಸ್ಥರನ್ನಾಗಿಸಿ ನೇಮಿಸಲಾಗುತ್ತಿದ್ದು ಆ ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭ ಮಾತನಾಡಿದ ಪ್ರತಿಭಾ ಶ್ರೀಧರ ಶೆಟ್ಟಿ, ವಿಟ್ಲ ಪೊಲೀಸರು ದೂರು ನೀಡಿದರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು. ಪೈಪ್ ಕಳವಾಗಿ ದಿನಗಳಾದರೂ ಎಫ್ ಐ ಆರ್ ಮಾಡಲು ವಿಳಂಬಿಸುವ ಕುರಿತು ಅವರು ಮಾಹಿತಿ ನೀಡಿದರು.
*ಗ್ರಾಮಸಭೆಗೆ ಸರಿಯಾದ ನೋಡಲ್ ಅಧಿಕಾರಿ ಬರಲಿ…
ಗ್ರಾಮಸಭೆಗಳಿಗೆ ಬರುವ ನೋಡಲ್ ಅಧಿಕಾರಿಗಳು ಸರಿಯಾದ ಮಾಹಿತಿಯೊಂದಿಗೆ ಬರಬೇಕು ಹಾಗೂ ಪ್ರತಿ ಗ್ರಾಮಸಭೆಯಲ್ಲೂ ಅಧಿಕಾರಿಗಳ ಹಾಜರಾತಿ ಕಡ್ಡಾಯ ಇರಬೇಕು ಎಂದು ಬಾಳೆಪುಣಿ ಸದಸ್ಯ ಹೈದರ್ ಕೈರಂಗಳ ಒತ್ತಾಯಸಿದರು. ಬಾಳೆಪುಣಿ ಗ್ರಾಮದ ಶಾಲೆಯೊಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಸ್ಥಳೀಯ ಕಾರ್ಖಾನೆಯೊಂದರ ಹೊಗೆ ಶಾಲಾ ತರಗತಿಯೊಳಗೆ ಪ್ರವೇಶಿಸುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೈದರ್ ಸಭೆಯ ಗಮನ ಸೆಳೆದರು.
ಅರ್ಧ ಬೆಂದ ಪೋಡಿ…
ಪೋಡಿಮುಕ್ತ ಗ್ರಾಮ ಘೋಷಣೆ ಏನಾಗಿದೆ, ಈಗ ಅದು ಅರ್ಧ ಬೆಂದ ಪೋಡಿಯಂತಾಗಿದೆ ಎಂದು ಕರೋಪಾಡಿ ಸದಸ್ಯ ಉಸ್ಮಾನ್ ಕರೋಪಾಡಿ ಲೇವಡಿ ಮಾಡಿದರು. ಸರಿಯಾದ ಭೂಮಿಯ ವಿಲೇವಾರಿ ಇದರಡಿ ನಡೆಯುತ್ತಿದೆಯೇ ಎಂದು ಉಸ್ಮಾನ್ ಪ್ರಶ್ನಿಸಿದರು.
*ಇಲಾಖಾವಾರು ಮಾಹಿತಿ ಮಾಧ್ಯಮಕ್ಕೆ ನೀಡಿ
ಪ್ರತಿಯೊಂದು ಇಲಾಖೆಯ ಚಟುವಟಿಕೆಗಳು ಸಾರ್ವಜನಿಕರಿಗೆ ದೊರಕುವಂತೆ ಮಾಡುವುದು ಅಗತ್ಯವಿದೆ. ಇಲಾಖೆಗಳ ಪ್ರತಿಯೊಂದು ಕಾರ್ಯಕ್ರಮಗಳು ಮಾಧ್ಯಮಗಳ ಮೂಲಕ ಜನರಿಗೆ ದೊರಕಬೇಕು ಎಂಬ ಅಮ್ಮುಂಜೆ ಸದಸ್ಯ ಶಿವಪ್ರಸಾದ್ ಕನಪಾಡಿ ಮನವಿಗೆ ಸ್ಪಂದಿಸಿದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರತಿಯೊಂದು ಇಲಾಖೆಗಳ ಮಾಹಿತಿಯೂ ಮಾಧ್ಯಮಗಳ ಮೂಲಕ ಜನರಿಗೆ ತಲುಪಬೇಕು ಎಂದು ಹೇಳಿದರು.
ಅಂಗನವಾಡಿ ಅನುದಾನ ಬಳಕೆ ಕುರಿತು ಸಿಡಿಪಿಒ ಅವರು ಸ್ಥಾಯಿ ಸಮಿತಿ ಸಭೆಯಲ್ಲಿ ಆಡಿದ ಮಾತು ತನಗೆ ನೋವು ತಂದಿದೆ ಎಂದು ಪಿಲಾತಬೆಟ್ಟು ಸದಸ್ಯ ರಮೇಶ ಕುಡ್ಮೇರು ಅವರು ಸಭೆಯ ಗಮನ ಸೆಳೆದರು.
ಎನ್‍ಆರ್‍ಜಿ ಅಡಿಯಲ್ಲಿ ಕೆಲಸ ಮಾಡಿರುವ ನಾಲ್ವರಿಗೆ ಅವರ ಕೂಲಿ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಸಭೆಯ ಗಮನ ಸೆಳೆದಾಗ ಆದಾರ್ ನಂಬರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಫಲಾನುಭವಿಗಳ ಹಣ ಜಮಾ ಆಗಿರಬಹುದೆಂದು ತೋಟಗಾರಿಕೆ ಇಲಾಖಾಧಿಕಾರಿ ಸಮಜಾಯಿಸಿ ನೀಡಿದರು. ಫಲಾನುಭವಿಗಳು ಒಂದೇ ಬ್ಯಾಂಕಿಬನಲ್ಲಿ ಖಾತೆಯನ್ನು ಹೊಂದಿದ್ದಾರೆ. ಅವರು ಬೇರೆ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ ಎಂದು ಉಸ್ಮಾನ್ ವಾದಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಇಒ ಅವರು ಈ ಕುರಿತು ಪರಶೀಲಿಸುವಂತೆ ಸೂಚಿಸಿದರು.
ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸಭಾಧ್ಯಕ್ಷತೆ ವಹಿಸಿ ಕಲಾಪ ನಡೆಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಇಒ ಸಿಪ್ರಿಯಾನ್ ಮಿರಾಂದ, ತಹಸೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.
ಸದಸ್ಯರಾದ ಯಶವಂತ ಪೂಜಾರಿ ಪೊಳಲಿ,ಪದ್ಮಶ್ರೀ,ಸಂಜೀವ ಪೂಜಾರಿ,ಮಹಾಬಲ ಆಳ್ವ,ಆದಂ ಕುಂಞ,ಕವಿತಾ ಎಸ್. ನಾಯಕ್, ಪ್ರಭಾಕರ ಪ್ರಭು,ರತ್ನಾವತಿ,ಮಂಜುಳಾ,ಸ್ವಪ್ನ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *