* 3 ಕಿ.ಮೀ.ನಲ್ಲಿ 4 ವೈನ್‍ಶಾಪ್, 2 ಬಾರ್ ಇದ್ದರೂ ಹೊಸ ಮದ್ಯದಂಗಡಿಗೆ ಅವಕಾಶ
* ಮದ್ಯದಂಗಡಿಯ ತವರೂರು ಆಗುತ್ತಿರುವ ಬಂಟ್ವಾಳ
ಬಂಟ್ವಾಳ: ಮದ್ಯ ವರ್ಜನ ಶಿಬಿರದ ಗ್ರಾಮವೆಂದೇ ಖ್ಯಾತಿ ಇರುವ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ಕ್ರಮದ ವಿರುದ್ಧ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಕೂಡಲೇ ಪರವಾನಿಗೆ ರದ್ದುಗೊಳಿಸಲಿದ್ದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ ಅಬಕಾರಿ ಕಾಯ್ದೆ ರೂಲ್ 12ರ ಪ್ರಕಾರ ನಗರ ಪ್ರದೇಶದಲ್ಲಿ 7500 ಜನಸಂಖ್ಯೆಗೆ ಒಂದರಂತೆ ಹಾಗೂ ಹಳ್ಳಿ ಪ್ರದೇಶದಲ್ಲಿ 15000 ಜನಸಂಖ್ಯೆಗೆ ಒಂದರಂತೆ ಮದ್ಯದಂಗಡಿಗೆ ಮರವಾನಿಗೆ ನೀಡಬಹುದು. ಆದರೆ ಬಂಟ್ವಾಳ ತಾಲೂಕಿನಲ್ಲಿ 2011ನೆ ಜನಸಂಖ್ಯೆಗೂ ಹೆಚ್ಚು ಪರವಾನಿಗೆ ಪಡೆದ ಮದ್ಯದಂಗಡಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿಗಿನ ಕೆಲವು ಸಮಯದಿಂದ ಮಂಗಳೂರು ನಗರದಿಂದ ಬಂಟ್ವಾಳ ತಾಲೂಕಿಗೆ ಹಲವು ಮದ್ಯದಂಗಡಿಗಳು ಸ್ಥಳಾಂತಗೊಂಡಿದೆ. ಆದರೂ ಕಾವಳ ಮೂಡೂರು ಗ್ರಾಮದ ನೆಲ್ಲಿಗುಡ್ಡೆಯಲ್ಲಿ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ಕ್ರಮ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿಗೆ ಹೊಂದಿಕೊಂಡಿರುವ ಕಾವಳ ಮೂಡೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವು ಬಾರಿ ಮದ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಗ್ರಾಮದ ನೂರಾರು ಮಂದಿಯನ್ನು ಕುಡಿತದ ಚಟದಿಂದ ಮುಕ್ತಗೊಳಿಸಿ ನೆಮ್ಮದಿಯ ಸಾಂಸಾರಿಕ ಜೀನವನ ನಡೆಸುವಂತೆ ಮಾಡಲಾಗಿದೆ. ಈ ಮಧ್ಯೆ ಗ್ರಾಮದಲ್ಲಿ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಮೂಲಕ ಕುಡಿತದ ಚಟದಿಂದ ಮುಕ್ತಿಗೊಳಿಸಿದವರನ್ನು ಮತ್ತೆ ಕುಡಿಯಲು ಪ್ರೇರಣೆ ನೀಡುವಂತಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕಾವಳ ಮೂಡೂರಿನಲ್ಲಿ ಪರವಾನಿಗೆ ನೀಡಿರುವ ಹೊಸ ಮದ್ಯದಂಗಡಿಗೆ 1ರಿಂದ 3 ಕಿಲೋ ಮೀಟರ್ ಅಂತರದಲ್ಲಿ 4 ವೈನ್‍ಶಾಪ್ ಮತ್ತು 2 ಬಾರ್‍ಗಳು ಕಾರ್ಯಚರಿಸುತ್ತಿದೆ. ಎಂ.ಎಸ್.ಐ.ಎಲ್.ನಿಂದ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಮೊದಲು ಸ್ಥಳೀಯ ಶಾಸಕ, ಜನಪ್ರತಿನಿಧಿಗಳ, ಗ್ರಾಮಸ್ಥರ ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಿದೆ.
ಆದರೆ ಇಲ್ಲಿ ಸ್ಥಳೀಯ ಶಾಸಕರ, ಜನ ಪ್ರತಿನಿಧಿಗಳ ಅಭಿಪ್ರಾಯ ಪಡೆಯದೆ ಮದ್ಯದಂಗಡಿಗೆ ಪರವಾನಿಗೆ ನೀಡಲಾಗಿದೆ ಎಂದು ತಿಳಿಸಿರುವ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಅಬಕಾರಿ ಇಲಾಖೆಯ ಅಧಿಕಾರಿಗಳು ರಾತ್ರಿ ಸಮಯದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು ಗ್ರಾಮಸ್ಥರ ಗಮನಕ್ಕೆ ತಾರದೆ ಒಂದು ಮನೆಯವರ ಸಹಿ ಪಡೆದು ಮದ್ಯದಂಗಡಿಗೆ ಗ್ರಾಮಸ್ಥರ ಸಹಮತವಿದೆ ಎಂದು ವರದಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನೆಲ್ಲಿಗುಡ್ಡೆಯಲ್ಲಿ ಪರವಾನಿಗೆ ನೀಡಿರುವ ಮದ್ಯದಂಗಡಿಯು ಮಸೀದಿ ಮದರಸಕ್ಕೆ ಸಮೀಪವಿದ್ದು ರಾತ್ರಿ ವೇಳೆ ಮದರಸದಿಂದ ವಿದ್ಯಾರ್ಥಿಗಳು ಮನೆಗೆ ತೆರಳುವ ಸಂದರ್ಭದಲ್ಲಿ ಕುಡುಕರಿಂದ ಕಿರುಕುಳ ನಡೆಯುವ ಸಂಭವವಿದೆ. ಅಲ್ಲದೆ ಕುಡಿತ ಮತ್ತಿನಲ್ಲಿ ಮಸೀದಿ, ಮದರಸಕ್ಕೆ ಹಾನಿಯುಂಟುಮಾಡುವುದು ಅಥವಾ ಗಲಾಟೆ ನಡೆಸಿ ಗ್ರಾಮದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಅಪಾಯವೂ ಇದೆ. ಆದ್ದರಿಂದ ಕಾವಳ ಮೂಡೂರಿನಲ್ಲಿ ಯಾವುದೇ ಮದ್ಯದಂಗಡಿಗೆ ಪರವಾನಿಗೆ ನೀಡಬಾರದು ಎಂದು ಧರ್ಮ ಭೇದ ಮರೆತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾಕ್ಸ್…
ಪ್ರಸ್ತುತ ಜನಸಂಖ್ಯೆಗೂ ಮೀರಿ ಮದ್ಯದಂಗಡಿಗಳು ಬಂಟ್ವಾಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮದ್ಯ ವರ್ಜನೆ ಶಿಬಿರದ ಮೂಲಕ ನೂರಾರು ಮಂದಿಯನ್ನು ಕುಡಿತದಿಂದ ಮುಕ್ತಗೊಳಿಸಿರುವ ಕಾವಳ ಮೂಡೂರು ಗ್ರಾಮದಲ್ಲಿ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡಿರುವುದು ನಾಚಿಕೆಯ ವಿಷಯ. ಅಬಕಾರಿ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು, ಪ್ರಜ್ಞಾವಂತ ನಾಗರಿಕರನ್ನು ಕತ್ತಲಲ್ಲಿ ಇಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರವಾನಿಗೆಯ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಹೊಸ ಮದ್ಯದಂಗಡಿಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಪರವಾನಿಗೆಯನ್ನು ತಡೆಹಿಡಿಯಬೇಕು. ಇಲ್ಲವಾದರೆ ಬೃಹತ್ ಹೋರಾಟ ರೂಪಿಸಲಾಗುವುದು.
– ಪ್ರಕಾಶ್ ಕಾರಂತ್, ಅಧ್ಯಕ್ಷರು ಬಂಟ್ವಾಳ ತಾಲೂಕು ಜನ ಜಾಗೃತಿ ಸಮಿತಿ

By suddi9

Leave a Reply

Your email address will not be published. Required fields are marked *