ಮೂಡುಬಿದ್ರೆ:ಮೂಡುಬಿದ್ರೆ ಪುರಸಭಾ ವ್ಯಾಪ್ತಿಯ ಗಾಂಧಿನಗರ ಸಮೀಪದಲ್ಲಿರುವ ಕಲ್ಲಸಡ್ಕ ಸಾರ್ವಜನಿಕ ಹಿಂದೂ ರುದ್ರಭೂಮಿಯು ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿ ಸುತ್ತಲೂ ಪೊದೆ ಮತ್ತು ಬಳ್ಳಿಗಳಿಂದ ಆವೃತಗೊಂಡಿದೆ. ಗುರುವಾರ ಬೆಳಿಗ್ಗೆ ನಡೆದ ಇಲ್ಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ವಾದಕ ಬಿ.ಜಿ.ರವೀಂದ್ರ ಬಂಟ್ವಾಳ್ ಇವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯಶಿಕ್ಷಕ ಜಗನ್ನಾಥ ಸಪಳಿಗ ಪೇಪರ್ಮಿಲ್ ನೇತೃತ್ವದಲ್ಲಿ ಮೃತರ ಕುಟುಂಬಿಕರು ಮತ್ತು ಸ್ಥಳೀಯರು ಕೆಲಹೊತ್ತು ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಸುವ ಮೂಲಕ ಗಮನ ಸೆಳೆದರು.
ಈ ಪ್ರದೇಶದಲ್ಲಿ ದಿನೇ ದಿನೇ ಹೊಸ ಮನೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಜನಸಂಖ್ಯೆಯೂ ವೃದ್ಧಿಸುತ್ತಿದೆ. ಇದರಿಂದಾಗಿ ಇಲ್ಲಿನ ನಾಗರಿಕರಿಗೆ ಭಾರೀ ಅತ್ಯಾವಶ್ಯಕವಾಗಿರುವ ರುದ್ರಭೂಮಿಯಲ್ಲಿ ಈಗಾಗಲೇ ಸುತ್ತಲೂ ಆವರಣ ಗೋಡೆ ನಿರ್ಮಿಸಿ, ಒಳಾಂಗಣಕ್ಕೆ ಇಂಟರ್ಲಾಕ್ ಅಳವಡಿಸಲಾಗಿದೆ. ಇನ್ನೊಂದೆಡೆ ನೀರಿನ ಟ್ಯಾಂಕ್, ಆರು ಕಾಂಕ್ರೀಟು ಪಿಲ್ಲರ್ ಸಹಿತ ಸಿಮೆಂಟ್ಶೀಟು ಅಳವಡಿಸಿದ ಎತ್ತರದ ಮಾಡು ಇದೆ. ಇದರೊಳಗೆ ಮೃತದೇಹ ಸುಡಲು ಒಂದು ಕಬ್ಬಿಣ ಮತ್ತು ಎರಡು ಇಟ್ಟಿಗೆಯಿಂದ ನಿರ್ಮಿಸಿದ ಸುಡುಕಟ್ಟೆ ಇದೆ. ಆದರೆ ಸುತ್ತಲೂ ಒಳ ಹುಲ್ಲು ಮತ್ತು ಮುಳ್ಳಿನ ಬಳ್ಳಿ ಆವರಿಸಿಕೊಂಡು ಪ್ರಾಣಿಯೂ ಇದರೊಳಗೆ ಬರಲು ಹಿಂದೇಟು ಹಾಕುವಂತಿದೆ….ಇನ್ನಾದರೂ ಇಲ್ಲಿನ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಖಾಸಗಿ ಸಹಭಾಗಿತ್ವದಲ್ಲಿ ಈ ಸಾರ್ವಜನಿಕ ಸ್ಮಶಾನ ಅಭಿವೃದ್ಧಿಪಡಿಸಲು ಮುಂದಾಗಲಿ ಎಂಬ ಆಗ್ರಹ ಇಲ್ಲಿನ ನಾಗರಿಕರಿಂದ ಕೇಳಿ ಬಂದಿದೆ.
ಎಂ.ಕೆ.ಶ್ರೀಯಾನ್ ರಾಯಿ
