ಡಿ.ಮನೋಹರ್ ಕುಮಾರ್ ನಮ್ಮ ಮೇಳದ ಖಾಯಂ ಕಲಾವಿದ : ತಲಕಲ ಮೇಳ ವ್ಯವಸ್ಥಾಪಕ ಸ್ಪಷ್ಟನೆ
ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಸ್ಥಳೀಯ ಮಾತೃಭೂಮಿ ಗೆಳೆಯರ ಬಳಗದ ವತಿಯಿಂದ ಮಾ.18ರಂದು ರಾತ್ರಿ ತಲಕಲ ಶ್ರೀ ಕಾಶಿ ವಿಶ್ವನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಕೊಳಂಬೆ ಮೇಳದ ಕಲಾವಿದರಿಂದ ಪ್ರದರ್ಶನಗೊಂಡ ‘ತುಳುನಾಡ್ದ ಸತ್ಯೊಲು’ ಎಂಬ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಕಲಾವಿದರೊಬ್ಬರಿಗೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮೇಳದ ವ್ಯವಸ್ಥಾಪಕ ಐತಪ್ಪ ತಲಕಲ ಇವರು ಬಿ.ಸಿ.ರೋಡ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅಂದು ನಡೆದ ಯಕ್ಷಗಾನ ಬಗ್ಗೆ ಸಂಘಟಕರು ಅಲ್ಲಲ್ಲಿ ಬ್ಯಾನರ್, ಫೆಕ್ಸ್ ಅಳವಡಿಸಿ ನಮ್ಮ ಮೇಳದ ಪ್ರಮುಖ ಕಲಾವಿದರಾಗಿರುವ ಡಿ.ಮನೋಹರ್ ಕುಮಾರ್, ವಿನೋದ್ ರೈ ಸೊರಕೆ, ಕಡಬ ದಿನೇಶ್ ರೈ, ಶಂಭಯ್ಯ ಭಟ್ ಕಂಜರ್ಪಣೆ, ನವೀನ ಉಜಿರೆ ಇದ್ದಾರೆ ಎಂದು ಪ್ರಚಾರಗೊಳಿಸಿದ್ದರು. ಇದೇ ವೇಳೆ ಏರ್ಪಡಿಸಿದ್ದ ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಹಿನ್ನೆಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಮಂದಿ ಪ್ರೇಕ್ಷಕರು ಪಾಲ್ಗೊಂಡಿದ್ದರು.
ಆದರೆ ಅಂದು ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಖಾಯಂ ಕಲಾವಿದ ಡಿ. ಮನೋಹರ್ ಕುಮಾರ್ ಅವರು ಇತರ ನಾಲ್ವರು ಮುಖ್ಯ ಕಲಾವಿದರೊಂದಿಗೆ ಬೇರೆ ಕಡೆ ಯಕ್ಷಗಾನವೊಂದಕ್ಕೆ ತೆರಳಿ ಬಳಿಕ ರಾತ್ರಿ 1 ಗಂಟೆಗೆ ಬದಲಾಗಿ ಮುಂಜಾನೆ 4 ಗಂಟೆಗೆ ಬಂದಿದ್ದರು. ಅಷ್ಟರೊಳಗೆ ಈ ಐವರು ಮಾಡಬೇಕಿದ್ದ ಪಾತ್ರವನ್ನು ಇತರ ಕಲಾವಿದರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.
ಈ ಬಗ್ಗೆ ಭಾರೀ ಆಕ್ರೋಶಗೊಂಡಿದ್ದ ಇಲ್ಲಿನ ಪ್ರೇಕ್ಷಕರಿಗೆ ಕಲಾವಿದ ಡಿ.ಮನೋಹರ ಕುಮಾರ್ ಅವರು ಗಂಟೆ 4.30ಕ್ಕೆ ಮತ್ತೆ ಮಂಗಳೂರಿನ ಸಸಿಹಿತ್ಲು ಮೇಳದಲ್ಲಿ ಪಾತ್ರ ನಿರ್ವಹಿಸಲು ಹೋಗುವುದಕ್ಕಾಗಿ ಸಿದ್ಧತೆ ನಡೆಸುತ್ತಿರುವುದನ್ನು ಕಂಡು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ಇದಕ್ಕಾಗಿ ಕೆಲವೊಂದು ಪ್ರೇಕ್ಷಕರು ಧಾವಿಸಿ ಬಂದು ಅವರನ್ನು ಕೂಡಲೇ ಟೆಂಟಿನ ಹೊರಗೆ ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಬಳಿ ನೂರಾರು ಮಂದಿ ಜಮಾಯಿಸಿ ಅವರಿಗೆ ಹಲ್ಲೆ ನಡೆಸಿದ್ದಾರೆ. ಅಂದಿನ ಕಾರ್ಯಕ್ರಮ ಸಂಘಟಕ ಶೇಖರ್ ಶೆಟ್ಟಿ ಅಮ್ಟಾಡಿ ಮತ್ತು ಮಹಿಳಾ ಸಂಘದ ಸದಸ್ಯೆಯರು ತಕ್ಷಣವೇ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಮೂಲಕ ಸಂಘಟಕರು ಮತ್ತು ನನಗೆ ಭಾರೀ ಗೊಂದಲ ಮತ್ತು ಮಾನಸಿಕ ಒತ್ತಡದಲ್ಲೇ ಯಕ್ಷಗಾನ ಕಾರ್ಯಕ್ರಮ ಪೂರ್ಣಗೊಳಿಸಬೇಕಾಯಿತು ಎಂದು ಅವರು ವಿವರಿಸಿದರು.
ಈ ವಿಚಾರ ಕೆಲವೊಂದು ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವುದನ್ನು ಕಂಡ ಡಿ.ಮನೋಹರ್ ಕುಮಾರ್ ಅವರು ತಮ್ಮ ತಪ್ಪನ್ನು ಮರೆಮಾಚಲು ತಾನು ತಲಕಲ ಮೇಳದಲ್ಲಿ ‘ಅತಿಥಿ ಕಲಾವಿದ’ ಎಂದು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇವರು ತಲಕಲ ಶ್ರೀ ಕಾಶಿ ವಿಶ್ವನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಕೊಳಂಬೆ ಇದರ ಖಾಯಂ ಕಲಾವಿದನಾಗಿದ್ದು, ಅವರಿಗೆ ಆರು ತಿಂಗಳಿಗೆ ರೂ 4.25ಲಕ್ಷ ಮೊತ್ತ ಪಾವತಿಸುವ ಬಗ್ಗೆ ನಾನು ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಒಂದು ಯಕ್ಷಗಾನ ಮೇಳ ನಡೆಸುವುದು ಎಷ್ಟು ಕಷ್ಟ ಎಂಬುದು ಸ್ವತಃ ಮೇಳ ನಡೆಸಿ ಡಿ.ಮನೋಹರ್ ಕುಮಾರ್ ಅವರಿಗೂ ಗೊತ್ತಿದೆ ಎಂದು ಹೇಳಿದ ಅವರು ನಮ್ಮ ಮೇಳವು ಕಳೆದ ಮೂರು ವರ್ಷಗಳಲ್ಲಿ ತಿರುಗಾಟ ಆರಂಭಿಸಲು ಸುಮಾರು ರೂ 20ಲಕ್ಷಕ್ಕೂ ಮಿಕ್ಕಿ ಹಣ ವಿನಿಯೋಗಿಸಿದೆ. ಈ ಬಾರಿ ಒಟ್ಟು 53 ಕಡೆ ಪ್ರದರ್ಶನ ನೀಡಿ, ಈಗಾಗಲೇ 30ಕ್ಕೂ ಮಿಕ್ಕಿ ಕಡೆ ಮುಂಗಡ ಕಾಯ್ದಿರಿಸಲಾಗಿದೆ ಎಂದರು.
ನಾವು ಎಂದಿಗೂ ಕಲಾವಿದರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ, ಆದರೆ ಅವರು ಮಾತ್ರ ತಮ್ಮ ಮೇಳಕ್ಕೆ ಅಷ್ಟೇ ನಿಷ್ಠರಾಗಿರಬೇಕು. ಯಾವುದೇ ಕಲಾವಿದರಿಗೆ ಪ್ರೇಕ್ಷಕರು ಹಲ್ಲೆ ನಡೆಸುವುದು ಕೂಡಾ ಅಕ್ಷಮ್ಯ ಅಪರಾಧವಾಗಿದ್ದು, ಅದೇ ರೀತಿ ಯಕ್ಷಗಾನ ಸಂಘಟಕರು ಮತ್ತು ಪ್ರೇಕ್ಷಕರ ಅಭಿಮಾನ ಉಳಿಸಿಕೊಳ್ಳುವಲ್ಲಿ ಕೂಡಾ ಕಲಾವಿದರಿಗೆ ಮಹತ್ತರ ಜವಾಬ್ದಾರಿ ಇದೆ ಎಂದು ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಸಂಘಟಕ ಶೇಖರ್ ಶೆಟ್ಟಿ ಅಮ್ಟಾಡಿ ಉಪಸ್ಥಿತರಿದ್ದರು.
