ಬಂಟ್ವಾಳ: ನಮ್ಮ ಬೇಡಿಕೆಯನ್ನು ಈಡೇರಿಸಿ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ನಿರ್ಮಿಸುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಗುರುವಾರ ಸಜಿಪನಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಪಂ ಅಧ್ಯಕ್ಷ ಸಜಿಪ ಮುಹಮ್ಮದ್ ನಾಸೀರ್ ಸ್ಪಷ್ಟಪಡಿಸಿದ್ದಾರೆ.
ಕಂಚಿನಡ್ಕಪದವಿನಲ್ಲಿ ಪುರಸಭೆ ನಿರ್ಮಿಸುತ್ತಿರುವ ತ್ಯಾಜ್ಯ ಸಂಸ್ಕರಣ ಘಟಕದ ವಿವಾದದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ಮತ್ತು ಸಜಿಪನಡು ಗ್ರಾಮ ಪಂಚಾಯತ್‍ನ ಜಂಟಿ ಸಭೆಯನ್ನು ಆಯೋಜಿಸಲಾಗಿತ್ತು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯಾಧಿಕಾರಿ ರತ್ನಪ್ರಸಾದ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಹಾಗೂ ಗ್ರಾಪಂನ ಉಪಾಧ್ಯಕ್ಷೆ ಸುನಿತ ಶಾಂತಿ ಮೋರಸ್, ಸದಸ್ಯರಾದ ಇಕ್ಬಾಲ್, ಅಬ್ದುಲ್ ರಹಿಮಾನ್, ರಶೀದ್, ಸುರೇಶ್ ಬಂಗೇರ ಹಾಗೂ ಮಾಜಿ ಜಿಪಂ ಸದಸ್ಯ ಎಸ್.ಅಬ್ಬಾಸ್, ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ ಸಭೆಯಲ್ಲಿ ಭಾಗವಹಿಸಿದರು.

10

11

15
ಸಭೆಯ ಆರಂಭದಲ್ಲಿ ಮುಖ್ಯಾಧಿಕಾರಿ ಸುಧಾಕರ್ ಅವರು ಘಟಕದ ಕುರಿತು ಮಾಹಿತಿ ನೀಡಿ, 2005ರಲ್ಲಿ ಘಟಕದ ಕಾಮಗಾರಿಯನ್ನು ಆರಂಭಿಸಲಾಗಿದೆ. ಇಲ್ಲಿನ 8 ಎಕರೆ ಜಮೀನು ಪುರಸಭೆಗೆ ಹಸ್ತಾಂತರವಾಗಿದೆ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲೇ ಈ ಘಟಕವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಘಟಕದಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಅದನ್ನು ಕೃಷಿಗೆ ಸದುಪಯೋಗ ಪಡಿಸಲಾಗುವುದು. ಘಟಕದ ಬಗ್ಗೆ ಅನುಮಾನಗಳಿದ್ದಲ್ಲಿ ನುರಿತ ವಿಜ್ಞಾನಿ ಡಾ. ಹರೀಶ್ ಜೋಷಿ ಅವರಿಂದ ಪ್ರಾತ್ಯಕ್ಷಿಗೆ ಕೊಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್.ಅಬ್ಬಾಸ್ ಪ್ರತಿಕ್ರಿಯಿಸಿ ಈ ಘಟಕದ ಬಗ್ಗೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ಪಂಚಾಯತ್, ತಾಪಂ, ಜಿಪಂ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಗ್ರಾಮಸ್ಥರು ಕೂಡಾ ಗ್ರಾಮ ಸಭೆಯನ್ನು ಬಹಿಷ್ಕರಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ, ಸಚಿವರು ಸೇರಿದಂತೆ ಪತ್ರವ್ಯವಹಾರವನ್ನು ದಾಖಲೆಗಳ ಮೂಲಕ ನಡೆಸಲಾಗಿದೆ. ಪಂಚಾಯತ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪುರಸಭೆ ಘಟಕವನ್ನು ನಿರ್ಮಿಸಿದೆ. ಪಂಚಾಯತ್‍ನಿಂದ ಎನ್‍ಒಸಿಯನ್ನು ಕೂಡಾ ಪಡೆದಿಲ್ಲ ಎಂದು ವಾದಿಸಿದರು.
ಇದೇ ವೇಳೆ ಮಧ್ಯೆ ಪ್ರವೇಶಿಸಿದ ಅಧ್ಯಕ್ಷ ನಾಸೀರ್ ಅವರು, ಘಟಕ ನಿರ್ಮಾನವಾಗಿರುವ ಸ್ಥಳ ಈ ಹಿಂದೆ ಬಡವರಿಗೆ ನಿವೇಶನಕ್ಕಾಗಿ ಕಾಯ್ದಿರಿಸಲಾಗಿತ್ತು. ನಿವೇಶನಕ್ಕಾಗಿ ಗ್ರಾಮಸ್ಥರಿಂದ ಪಂಚಾಯತ್‍ಗೆ ನೂರಾರು ಅರ್ಜಿಗಳು ಬಂದಿದ್ದು ನಿವೇಶನ ನೀಡಲು ಗ್ರಾಮದಲ್ಲಿ ಸರಕಾರಿ ಜಮೀನು ಇಲ್ಲ. ಜೊತೆಗೆ ಇಷ್ಟನ್ನು ಸರಕಾರಿ ಜಮೀನನ್ನು ಕೂಡಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಲಾಗಿದೆ ಎಂದು ಸಹಾಯಕ ಆಯುಕ್ತರ ಗಮನ ಸೆಳೆದರು.
ನಿರ್ವಹಣೆ ಯಾರು?: ಸಂಸ್ಕರಣಾ ಘಟಕ ನಿರ್ಮಾಣಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಪರಿಸರದಲ್ಲಿರುವ ಮನೆ, ಶಾಲೆ, ಅಂಗನವಾಡಿ, ಸಮುದಾಯ ಭವನ, ಮದರಸ ಇವುಗಳಿಗೆ ಪರ್ಯಾಯ ವ್ಯವಸ್ಥೆ ಮೊದಲು ಕಲ್ಪಿಸಬೇಕು ಮತ್ತು ಘಟಕದ ಮುಂದಿನ ನಿರ್ವಹಣೆಗೆ ಯಾರು ಜವಾಬ್ದಾರರು ಯಾರು ಎಂಬುದನ್ನು ಕೂಡಾ ಸ್ಪಷ್ಟಪಡಿಸುವಂತೆ ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ಇದೇ ವೇಳೆ ಸದಸ್ಯರಾದ ಇಕ್ಬಾಲ್ ಮತ್ತು ಅಬ್ದುಲ್ ರಹ್ಮಾನ್ ಅವರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣ ಘಟಕ ನಿರ್ಮಿಸಿದ ನಂತರ ಆಗುತ್ತಿರುವ ಸಮಸ್ಯೆಯೂ ಇಲ್ಲಿ ಕೂಡಾ ನಿರ್ಮಾಣವಾಗುವ ಆತಂಕವನ್ನು ವ್ಯಕ್ತಪಡಿಸಿದರಲ್ಲದೆ, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಯೋಜನೆಗಳಿಗೆ ಸಜಿಪನಡು ಗ್ರಾಮದ ಸರಕಾರಿ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ನಮ್ಮ ಗ್ರಾಮಸ್ಥರಿಗೆ ಇದರಿಂದ ನೀರೂ ಇಲ್ಲ, ಭೂಮಿಯೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಒಂದಾ ಘಟಕವನ್ನು ಸ್ಥಳಾಂತರಿಸಿ, ಇಲ್ಲದಿದ್ದರೆ ನಮ್ಮ ಬೇಡಿಕೆಯನ್ನು ಈಡೇರಿಸಿ ಮತ್ತೆ ಘಟಕ ಆರಂಭಿಸಿ. ಆದುವರೆಗೆ ಕಾಮಗಾರಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಈ ಹಂತದಲ್ಲಿ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಅವರು ಪ್ರತಿಕ್ರಿಯಿಸಿ, ನಿರ್ವಹಣೆಗೆ ಸಂಬಂಧಿಸಿದಂತೆ ಪುರಸಭೆಯನ್ನೇ ಹೊಣೆಯನ್ನಾಗಿಸಿ ಜಿಲ್ಲಾಧಿಕಾರಿ ಹಾಗೂ ಸರಕಾರಿ ಮಟ್ಟದಿಂದಲೇ ಆದೇಶವೊಂದನ್ನು ಹೊರಡಿಸಲು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಎಸಿಯಿಂದ ಸ್ಥಳ ಪರಿಶೀಲನೆ: ಸಭೆಯ ಬಳಿಕ ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಘಟಕ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಖ್ಯಾಧಿಕಾರಿ ಸುಧಾಕರ್ ಅವರಿಂದ ಘಟಕದಲ್ಲಿ ಕಸ ವಿಲೇವಾರಿಯ ಕುರಿತಂತೆ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ ಪ್ರಸಾದ್, ಘಟಕದಿಂದಾಗಿ ಗ್ರಾಮಸ್ಥರಲ್ಲಿ ಉಂಟಾಗಿರುವ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನುರಿತ ವಿಜ್ಞಾನಿ ಡಾ. ಹರೀಶ್ ಜೋಷಿ ಅವರಿಂದ ಸ್ಥಳದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುವುದು. ಕಾರ್ಕಳ ಮತ್ತು ಮೂಡಬಿದರೆ ಪುರಸಭೆ ಈಗಾಗಲೇ ನಿರ್ಮಿಸಿರುವ ಘಟಕದ ಮಾದರಿಯಲ್ಲೇ ವೈಜ್ಞಾನಿಕವಾಗಿ ಇಲ್ಲೂ ಸಂಸ್ಕರಣಾ ಘಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಕೋರಲಾಗುವುದು. ಗ್ರಾಮ ಪಂಚಾಯತ್ ಮುಂದಿಟ್ಟಿರುವ ಬೇಡಿಕೆಯನ್ನು ಪರಿಹರಿಸಲು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗುವುದು ಎಂದರು.

ಬಾಕ್ಸ್…
ಯಾರ್ಡ್‍ಗೆ ಖಾದರ್ ಅಡ್ಡಿ!
ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ಆರಂಭಗೊಂಡು ಇದೀಗ ಕಾಮಗಾರಿ ಸ್ಥಗಿತಗೊಂಡಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕವು ಸಚಿವ ಯು.ಟಿ.ಖಾದರ್ ಅಧಿಕಾರದಲ್ಲಿ ಇರುವ ತನಕ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಇದು ನಿಶ್ಚಿತ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನೂ ಆದ ಕಲ್ಲು ಕೋರೆ ನಡೆಸುತ್ತಿರುವ ಬಶೀರ್ ಎಂಬವರು ಸ್ಥಳದಲ್ಲಿದ್ದ ಸುದ್ದಿಗಾರರೊಂದಿಗೆ ಘಂಟಾಘೋಷವಾಗಿ ಘೋಷಿಸಿದರು.
ಇದು ಯಾಕೆ ಎಂದು ಪತ್ರಕರ್ತರ ಪ್ರಶ್ನೆಗೆ, ಕಂಚಿನಡ್ಕ ಪದವು ಪ್ರಭಾವಿ ರಾಜಕಾರಣಿಗಳ ಕಲ್ಲು ಕೋರೆಗಳು ಇರುವ ಪ್ರದೇಶವಾಗಿದೆ ಎಂದು ಪರೋಕ್ಷವಾಗಿ ಉತ್ತರಿಸಿದರು.

By suddi9

Leave a Reply

Your email address will not be published. Required fields are marked *