ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಯ ವೇಳೆ ನೀರಿನ ಪೈಪೊಂದು ಒಡೆದು ಭಾರೀ ಪ್ರಮಾಣದಲ್ಲಿ ಹರಿದ ನೀರು ಹಾಗೂ ಕೆಸರಿನಲ್ಲಿ ಕಾರೊಂದು ಸಿಲುಕಿಕೊಂಡ ಘಟನೆ ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆಯಿತು.
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ದಿನದ 24 ಗಂಟೆಯೂ ನೀರು ಪೂರೈಸುವ ಸಮಗ್ರ ಕುಡಿಯುವ ನೀರು ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು ಇಂದು ಬೆಳಗ್ಗೆ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಪೈಪ್‍ಲೈನ್ ಅಳವಡಿಕೆಯ ಕಾಮಗಾರಿ ನಡೆದವು. ಪೈಪ್‍ಲೈನ್‍ಗಾಗಿ ತೋಡು ನಿರ್ಮಾಣ ಮಾಡುತ್ತಿದ್ದ ವೇಳೆ ಈ ಹಿಂದೆ ಅಳವಡಿಸಿದ್ದ ನೀರಿನ ಪೈಪೊಂದು ಒಡೆದ ಪರಿಣಾಮ ಭಾರೀ ಪ್ರಮಾಣದಲ್ಲಿ ನೀರು ಹರಿದು ಸರ್ವೀಸ್ ರಸ್ತೆಯಲ್ಲಿ ಕೊಳ ಮಾದರಿಯಲ್ಲಿ ನೀರು ನಿಂತಿತ್ತು.
ಇದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತಲ್ಲದೆ, ತೋಡಿಗಾಗಿ ಅಗೆದು ಮಣ್ಣಿಗೆ ನೀರು ಸೇರಿ ಉಂಟಾದ ಕೆಸರಿನಲ್ಲಿ ಕಾರೊಂದು ಸಿಲುಕಿಕೊಂಡಿತ್ತು. ಕೆಸರಿನಲ್ಲಿ ಹೂತ ಕಾರನ್ನು ಹೊರ ತೆಗೆಯಲು ಚಾಲಕ ಮತ್ತು ಸಾರ್ವಜನಿಕರ ವಿಫಲ ಪ್ರಯತ್ನದ ಬಳಿಕ ಪೈಪ್‍ಲೈನ್ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಯಂತ್ರದ ಸಹಾಯದಿಂದ ಕಾರನ್ನು ಹೊರ ತೆಗೆಯಲಾಗಿತು. ಈ ವೇಳೆಗೆ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಕೆಲವೊತ್ತು ಟ್ರಾಫಿಕ್ ಜಾಮ್ ಉಂಟಾಗಿಯು.

