ಕೊಯಿಲ:ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಅರಳ-ಕೊಯಿಲ, ಬಂಟ್ವಾಳ ತಾಲೂಕು, ದ.ಕ.ಜಿಲ್ಲೆ ಪೆ. 01 ಬುಧವಾರದಿಂದ ಪೆ.11 ಶನಿವಾರ ತನಕ ಅರಳ-ಕೊಯಿಲ ಪರಿವಾರ ದೇವತಾ ಸಹಿತ ಶ್ರೀ ಗರುಡ ಮಹಾಕಾಳಿ ಅಮ್ಮನವರ ದೇವಾಲಯದಲ್ಲಿ ಬ್ರಹ್ಮಶ್ರೀ ಉದಯ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ”ಬ್ರಹ್ಮಕಲಶಾಭಿಷೇಕ ಮಹೋತ್ಸವ”ವು ಆಗಮೋಕ್ತ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಲಿರುವುದು. ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಕ್ತಿ ಶ್ರದ್ಧೆಗಳಿಂದ ಸಹಭಾಗಿಗಳಾಗಿ ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ,
ಎ.ರಾಜ ಭಟ್ ಹುಣ್ಸೆಯಡಿ ಎನ್.ಎಂ.ಅಡ್ಯಂತಾಯ ಎ.ರಾಜೇಂದ್ರ ಶೆಟ್ಟಿ ಪ್ರಧಾನ ಅರ್ಚಕರು ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಎಸ್.ಮುರಳೀಧರ ಶೆಟ್ಟಿ , ಜಗದೀಶ ಆಳ್ವ ಅಗ್ಗೊಂಡೆ
ಪ್ರಧಾನ ಕಾರ್ಯದರ್ಶಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಜೀರ್ಣೋದ್ಧಾರ ಸಮಿತಿ ಬ್ರಹ್ಮಕಲಶೋತ್ಸವ ಸಮಿತಿ ಸರ್ವ ಸದಸ್ಯರು ಹಾಗೂ ಗುತ್ತು ಬರ್ಕೆಯವರು. ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು ಹಾಗೂ ಅರಳ-ಕೊಯಿಲ ಗ್ರಾಮಸ್ಥರು.
ವೈಶಿಷ್ಟ್ಯತೆ:
ಸುತ್ತಲೂ ಹಚ್ಚ ಹಸುರಿನ ವೃಕ್ಷ ಸಂಪತ್ತಿನ ಜೊತೆಗೆ ವಿಶಾಲವಾದ ಗದ್ದೆ, ಅಡಿಕೆ, ತೆಂಗು, ಬಾಳೆ ತೋಟಗಳ ನಡುವೆ ಪ್ರಕೃತಿ ರಮಣೀಯತೆಯಿಂದ ದೇಗುಲವು ಕಂಗೊಳಿಸುತ್ತಿದೆ. ಸುಮಾರು 800 ವರ್ಷಗಳ ಹಿಂದೆ ಇಲ್ಲಿ ವೇಣೂರು ಅಜಿಲ ಅರಸ ವಂಶಸ್ತರಿಂದ ಪೂಜಿಸಲಾಗುತ್ತಿತ್ತು ಎಂಬ ಪ್ರತೀತಿ ಇದೆ. ಈ ಕ್ಷೇತ್ರದಲ್ಲಿ ಅಷ್ಟಭುಜ ಹೊಂದಿರುವ ಏಳೂವರೆ ಅಡಿ ಎತ್ತರದ ಮಹಾಕಾಳಿ ದಾರು (ಮರ)ವಿಗ್ರಹವು ನೀಳವಾದ ನಾಲಗೆ ಹೊರಚಾಚಿಕೊಂಡಿರುವುದು ದಕ್ಷಿಣ ಭಾರತದಲ್ಲೇ ಅಪರೂಪ ಎಂದು ಹೇಳಲಾಗುತ್ತಿದೆ.
ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಈ ಕ್ಷೇತ್ರವು ಕಳೆದ 12 ವರ್ಷಗಳ ಹಿಂದೆ ಕೇವಲ 108 ದಿನಗಳಲ್ಲಿ ಒಟ್ಟು ರೂ 1.20ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ನವೀಕರಣಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮ ಕಂಡಿದೆ. ಇದೇ ವೇಳೆ ಕಾಂಕ್ರೀಟು ಸುತ್ತು ಪೌಳಿ, ಗರ್ಭಗುಡಿ ಮಾಡಿಗೆ ತಾಮ್ರದ ಹೊದಿಕೆ, ಮೇಲ್ಛಾವಣಿಗೆ ಶೀಟು ಅಳವಡಿಕೆ, ನೂತನ ಸಭಾಂಗಣ ನಿರ್ಮಾಣಗೊಂಡಿದೆ. ಕಳೆದ ಏಳು ವರ್ಷಗಳ ಹಿಂದೆ ಇಲ್ಲಿಗೆ ಸಂಬಂಧಪಟ್ಟ ಕೊಟ್ಟದಡ್ಕ ದೈವಸ್ಥಾನ ಪುನರ್ ನಿರ್ಮಿಸಿ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಸಲಾಗಿದೆ. ಇದೀಗ ಬ್ರಹ್ಮಕಲಶೋತ್ಸವ ಪ್ರಯುಕ್ತ ಮತ್ತೆ ರೂ 80ಲಕ್ಷ ವೆಚ್ಚದಲ್ಲಿ ಒಳಾಂಗಣ ಮತ್ತು ಹೊರಾಂಗಣಕ್ಕೆ ಕಲ್ಲು ಹಾಸುವಿಕೆ, ಕುಡಿಯುವ ನೀರಿನ ಟ್ಯಾಂಕ್ ರಚನೆ, ಪ್ರತ್ಯೇಕ ಎರಡು ಪರ್ಯಾಯ ರಸ್ತೆ ನಿರ್ಮಾಣ, ಪ್ರಾಂಗಣ ವಿಸ್ತಾರ ಮತ್ತಿತರ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ದೇವಳಕ್ಕೆ ನೂತನ ರಥ ಸಮರ್ಪಣೆ, ಆವರಣಗೋಡೆ ರಚನೆ, ಪಾಕಶಾಲೆ, ಪ್ರವಾಸಿ ಭಕ್ತರಿಗೆ ವಸತಿಗೃಹ ಮತ್ತಿತರ ಸೌಲಭ್ಯ ಒದಗಿಸಲು ಇಲ್ಲಿನ ಆಡಳಿತ ಮಂಡಳಿ ಚಿಂತನೆ ನಡೆಸಿದ್ದು, ಇದಕ್ಕಾಗಿ ಭಕ್ತರು ಮತ್ತು ಸರ್ಕಾರದಿಂದ ದೇಣಿಗೆ ಮತ್ತು ಗರಿಷ್ಟ ಪ್ರಮಾಣದ ಅನುದಾನವೂ ಅಗತ್ಯವಿದೆ.
ದೇಣಿಗೆ ನೀಡಲಿಚ್ಚಿಸುವ ಭಕ್ತರು ಬಿ.ಸಿ.ರೋಡ್ನ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಇದರ ಐಎಫ್ಎಸ್ಸಿ ಕೋಡ್: ಕೆವಿಜಿಬಿ0005001 ಎಸ್ಬಿ ಖಾತೆ ಸಂಖ್ಯೆ: 0000017107511909 ಇಲ್ಲಿಗೆ ಸಂದಾಯವಾಗುವಂತೆ ಕಳುಹಿಸಲು ಆಡಳಿತ ಮಂಡಳಿ ವಿನಂತಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಉದ್ಯೋಗ, ವೈವಾಹಿಕ ಸಂಬಂಧ, ಸಂತಾನ ಪ್ರಾಪ್ತಿ, ರೋಗ ಬಾಧೆ, ಶತ್ರು ಬಾಧೆ ನಿವಾರಣೆ ಮತ್ತಿತರ ಭಕ್ತರ ಇಷ್ಟಾರ್ಥ ಪ್ರಾಪ್ತಿಗಾಗಿ ದೇವಿಗೆ ಸೀರೆ, ಬಳೆ, ಕುಂಕುಮ, ಹೂವು, ಚಿನ್ನಾಭರಣ ಸಮರ್ಪಿಸಿ ಭಕ್ತರು ಕೃತಾರ್ಥರಾಗುತ್ತಿದ್ದಾರೆ.

ಸೌಹಾರ್ದತೆ ತಾಣ:
ಜಿಲ್ಲೆಯ ಫಲ್ಗುಣಿ ನದಿಗೆ ಸಮೀಪದಲ್ಲಿರುವ ಈ ಕ್ಷೇತ್ರವು ಸೌಹಾರ್ದತೆಯ ಸಂಕೇತವಾಗಿಯೂ ಗುರುತಿಸಿಕೊಂಡಿದೆ. ಅರಳ ಮತ್ತು ಕೊಯಿಲ ಎರಡು ಗ್ರಾಮಗಳಲ್ಲಿ ಭಂಡಾರ ಮನೆ ಹೊಂದಿರುವುದು ಇಲ್ಲಿನ ವೈಶಿಷ್ಟ್ಯತೆಯಾಗಿದೆ. ಗರುಡ ವಾಹನ ಸಹಿತ ಮಹಾಕಾಳಿ ಮತ್ತು ಮಹಾಗಣಪತಿ ದೇವರ ದಾರು ವಿಗ್ರಹ ಮಾತ್ರವಲ್ಲದೆ ಪರಿವಾರ ದೈವಗಳಾಗಿ ಉಳ್ಳಾಲ್ತಿ, ಧೂಮಾವತಿ, ಮಹಿಷಂತಾಯ, ಕುಂಭಕಂಠಿಣಿ, ಇಷ್ಟದೈವ ಒಡ್ಯಾಣೇಶ್ವರಿ, ಕಲ್ಕುಡ, ಕಲ್ಲುರ್ಟಿ ದೈವವು ಕ್ಷೇತ್ರಕ್ಕೆ ಆಗಮಿಸುವ ಭಕ್ತರನ್ನು ಹರಸುತ್ತ್ತಿದೆ.
ಪ್ರತೀ ವರ್ಷ ಆಗಮೋಕ್ತ ರೀತಿಯಲ್ಲಿ ಐದು ದಿನಗಳ ವಾರ್ಷಿಕ ಜಾತ್ರೆ ಸಹಿತ ಗಾಯತ್ರಿ ಪೂಜೆ, ನವರಾತ್ರಿ ಪೂಜೆ, ದೀಪಾವಳಿ ಉತ್ಸವ, ಚಂದ್ರಮಂಡಲ ರಥ, ಗಣೇಶ ಚತುರ್ಥಿ, ಸಂಕ್ರಮಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ. ಇದರಿಂದಾಗಿ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮುಂಬೈ ಮತ್ತಿತರ ಕಡೆಗಳಿಂದಲೂ ಅಪಾರ ಮಂದಿ ಭಕ್ತರು ಕ್ಷೇತ್ರಕ್ಕೆ ಬಂದು ಕೃತಾರ್ಥರಾಗುತ್ತಿದ್ದಾರೆ.
ಕ್ಷೇತ್ರದ ಹಿನ್ನೆಲೆ:
ಪುರಾಣದಲ್ಲಿ ಉಲ್ಲೇಖವಾಗಿರುವಂತೆ ರಕ್ತ ಬೀಜಾಸುರನ ರಕ್ತವು ಭೂಮಿ ಸ್ಪರ್ಶಿಸಿದಾಗ ಸಹಸ್ರಾರು ಮಂದಿ ಅಸುರರು ಹುಟ್ಟಿ ಬರುತ್ತಿದ್ದ ವೇಳೆ ಶ್ರೀದೇವಿಯ ಅಪ್ಪಣೆಯಂತೆ ಉಗ್ರ ಸ್ವರೂಪಿಣಿಯಾದ ಮಹಾಕಾಳಿಯು ಅವತಾರ ತಾಳಿ ಬೃಹತ್ ಗಾತ್ರದ ನಾಲಗೆ ಹೊರಚಾಚಿ ಅಸುರರ ರಕ್ತ ಹೀರಿ ಬಳಿಕ ಅವರನ್ನು ಸಂಹರಿಸಿದಳು ಎಂಬ ಪ್ರತೀತಿ ಇದೆ.
ಈ ಸಂದರ್ಭದಲ್ಲಿ ಮಹಾಕಾಳಿಯು ಭಕ್ತರ ಇಷ್ಟಾರ್ಥ ಈಡೇರಿಸುವ ಸಲುವಾಗಿ ತನ್ನ ವಾಹನ ಗರುಡನ ಮೇಲೇರಿ ವಿಹರಿಸುತ್ತಿದ್ದಾಗ ವಿಶ್ರಾಂತಿಗಾಗಿ ಬೆಟ್ಟಗುಡ್ಡಗಳಿಂದ ಕೂಡಿದ ಪ್ರಕೃತಿ ಸೌಂದಂiÀರ್iಭರಿತ ಅರಳ ದೇವರಗುಡ್ಡೆ ಎಂಬಲ್ಲಿ ಇಳಿದು ತೂಗುಯ್ಯಾಲೆಯಲ್ಲಿ ಪವಡಿಸಿ ಬಳಿಕ ಋಷಿ ಮುನಿಗಳ ಪೂಜೆ ಮತ್ತು ಭಕ್ತಿಗೆ ಒಲಿದು ಇಲ್ಲೇ ನೆಲೆಯಾದಳು ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

