ವಿಟ್ಲ: ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ನಿಝಾರ್ ಎಂಬಾತನ ಬಗ್ಗೆ ಕೆಲವು ತಿಂಗಳ ಹಿಂದೆ ವಿದೇಶದಲ್ಲಿರುವ ಕಾನತ್ತಡ್ಕ ಆರೀಸ್ ಹಾಗೂ ಆತನ ಸ್ನೇಹಿತ ಸಾಮಾಜಿಕ ತಾಲತಾಣದಲ್ಲಿ ಅವಹೇಳಕಾರಿಯಾಗಿ ಬರೆದು ನಿಂದಿಸಿದ್ದರು. ಈ ಬಗ್ಗೆ ನಿಝಾರ್ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲವು ಸಮಯಗಳ ಬಳಿಕ ವಿಟ್ಲ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆಗೊಳಿಸಿದ್ದರು. ಇದೇ ವಿಚಾರದಲ್ಲಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಈ ಬಗ್ಗೆ ಅಬುದಾಭಿಯಲ್ಲಿ ಉದ್ಯೋಗದಲ್ಲಿರುವ ಆರೋಪಿ ಕಾನತ್ತಡ್ಕ ಆರೀಸ್ ಎಂಬಾತ ಪತ್ರಕರ್ತ ಮಹಮ್ಮದ್ ಅಲಿ ಅವರಿಗೆ ಕರೆ ಮಾಡಿ ನಿಂದಿಸಿದ್ದರು. ಅದಲ್ಲದೇ ವಾಟ್ಸ್ ಆಫ್ ಮೂಲಕ ಸಂದೇಶ ಕಳುಹಿಸಿ “ನೀನು ವಿಟ್ಲದಲ್ಲಿ ಬಾರೀ ದೊಡ್ಡ ಜನವಾಗಿದ್ದಿಯಾ? ನಿನ್ನನ್ನು ನಾನು ಬಿಡುವುದಿಲ್ಲ. ನಾನು ಬೇರೆಯೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಬರುತ್ತೇನೆ” ಅದರ ಬಗ್ಗೆ ನೀನು ಪತ್ರಿಕೆಯಲ್ಲಿ ವರದಿ ಮಾಡುತ್ತೀಯಾ ಎಂದು ಅವಾಜ್ ಹಾಕಿದ್ದಲ್ಲದೇ ನಿನ್ನನ್ನು ನೋಡಿ ಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ನಿಂದಿಸಿದ್ದಾರೆ.
ಈ ಬಗ್ಗೆ ಮಹಮ್ಮದ್ ಅಲಿ ಅವರು ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ ಅವರಿಗೆ ಮಾಹಿತಿ ನೀಡಿದ್ದು, ಅವರ ಸೂಚನೆ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾನತ್ತಡ್ಕ ಆರೀಸ್ ಅವರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಖಂಡನೆ:
ಈ ಘಟನೆಯನ್ನು ಬಂಟ್ವಾಳ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅವರು ಖಂಡಿಸಿದ್ದು, ನಿರಂತರವಾಗಿ ಪತ್ರಕರ್ತರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಪತ್ರಕರ್ತರಿಗೆ ಅಡ್ಡಿಪಡಿಸಲಾಗುತ್ತಿದೆ. ತಕ್ಷಣವೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

