ಬಂಟ್ವಾಳ: ಸಮಾಜದಲ್ಲಿ ಈ ಹಿಂದೆ ರಾಜಾಶ್ರಯ ಕೊನೆಗೊಂಡ ಬಳಿಕ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಢ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರಿಗೂ ತೊಡಗಿಸಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ಇದರಿಂದಾಗಿ ಕೇರಳ ರಾಜ್ಯಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಶನಿವಾರ ನಡೆದ ಮಕರ ಸಂಕ್ರಮಣ ವಿಶೇಷ ಪೂಜೆ ಮತ್ತು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಗ್ಧ ಮನಸ್ಸಿನ ಮಗುವಿನಂತಿರುವ ದೇವರಿಗೆ ಬ್ರಹ್ಮಕಲಶೋತ್ಸವ ನಡೆಸಿದಂತೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿರುವ ದ್ವೇಷ, ಅಸೂಯೆ, ಮದ, ವ್ಯಾಮೋಹ ತೊಲಗಿಸಲು ಮನ ಶುದ್ಧೀಕರಣಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ವಿಗ್ರಹ ಹೊಂದಿರುವ ನೂರಾರು ದೇವಸ್ಥಾನ ಮತ್ತು ದೈವಸ್ಥಾನಗಳಿಗೆ ಪ್ರತೀ 12 ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಹಿಂದೂ ಸಂಸ್ಕೃತಿ ಅನಾವರಣಗೊಳ್ಳುತ್ತಿದ್ದು, ಇಲ್ಲಿನ ದೇವಸ್ಥಾನ ಇತರರಿಗೆ ಮಾದರಿಯಾಗಿದೆ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗೂಡಿ ನಮ್ಮ ಜೀವಿತಾವಧಿಯಲ್ಲಿ ಸಿಗುವ ಮಹತ್ತರ ಅವಕಾಶ ಎಂಬಂತೆ ಧಾರ್ಮಿಕತೆಯಲ್ಲಿ ಶ್ರಮಿಸಿದಾಗ ಜೀವನ ಪಾವನವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವ ಬಿ.ರಮಾನಾಥ ರೈ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಇವರು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್, ಕ್ಷೇತ್ರದ ಆಡಳಿತ ಮೊಕ್ತೇಸರ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ರಾಜೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ, ಕೆಪಿಟಿಸಿಎಲ್ ನಿರ್ದೇಶಕ ಆನಂದ ಪ್ರಸಾದ್ ಸಾಮಾನಿ, ಕ್ಷೇತ್ರದ ಪ್ರಧಾನ ಅರ್ಚಕ ಎ.ರಾಜ ಭಟ್ ಹುಣ್ಸೆಯಡಿ ಮತ್ತಿತರರು ಶುಭ ಹಾರೈಸಿದರು.
ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಅರಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಮುರಳೀಧರ ಶೆಟ್ಟಿ, ವಿವಿಧ ಉಪ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಬಿ.ಡೊಂಬಯ ಅರಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಫೆ.1ರಿಂದ 11ರತನಕ ದೇವರಿಗೆ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಫೆ.2ರಂದು ಆಕರ್ಷಕ ಹೊರೆಕಾಣಿಕೆ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಅವರು ಪ್ರಕಟಿಸಿದರು.

