ಬಂಟ್ವಾಳ: ಕಳೆದ ತಿಂಗಳು ನಡೆಯಬೇಕಿದ್ದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆ ರಾಜ್ಯದೆಲ್ಲೆಡೆ ಮುಂದೂಡಲ್ಪಟ್ಟು ಇದೇ 12ರಂದು ಚುನಾವಣೆನಡೆಯಲಿದೆ. ಇಲ್ಲಿನ ಒಟ್ಟು 13 ಸ್ಥಾನಗಳಿಗೆ ಆರಂಭದಲ್ಲಿ 29 ಮಂದಿ ನಾಮಪತ್ರ ಸಲ್ಲಿಸಿದ್ದು, ಬಳಿಕ ನಾಲ್ವರು ಹಿಂತೆಗೆದುಕೊಂಡ ಪರಿಣಾಮ ಅಂತಿಮವಾಗಿ 25 ಮಂದಿ ಕಣದಲ್ಲಿ ಉಳಿದಿದ್ದಾರೆ. ಒಟ್ಟು 13 ಸ್ಥಾನಗಳ ಪೈಕಿ 11 ಕೃಷಿಕರ ಕ್ಷೇತ್ರಕ್ಕೆ ತಲಾ ಎರಡರಂತೆ ಒಟ್ಟು 22 ಮಂದಿ ಮತ್ತು ಒಂದು ಕ್ಷೇತ್ರದಲ್ಲಿ ಮಾತ್ರ ಮೂವರು ಕಣದಲ್ಲಿದ್ದಾರೆ. ಉಳಿದಂತೆ ವರ್ತಕರ ಕ್ಷೇತ್ರದಲ್ಲಿ ಇಬ್ಬರು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಈಗಾಗಲೇ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಂದು ತಿಂಗಳು ಚುನಾವಣೆ ಮುಂದೂಡಿದ ಪರಿಣಾಮ ಕಾಂಗ್ರೆಸ್ ಮತ್ತು ಬಿಜೆಪಿ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಮಂದಿ ಕೃಷಿಕರು ಮತ್ತು ವರ್ತಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಹಕಾರಿಯಾಗಿದೆ.
ಕ್ಷೇತ್ರ ಮತ್ತು ಅಭ್ಯರ್ಥಿಗಳ ವಿವರ:
ಸಂಗಬೆಟ್ಟು ಕ್ಷೇತ್ರ: ವಸಂತ ಕುಮಾರ್ ಅಣ್ಣಳಿಕೆ ಮತ್ತು ಪದ್ಮರಾಜ ಬಲ್ಲಾಳ್ ಮಾವಂತೂರು, ಚೆನ್ನೈತ್ತೋಡಿ ಕ್ಷೇತ್ರ: ಮಲ್ಲಿಕಾ ಅಜಿತ್ ಶೆಟ್ಟಿ ಮತ್ತು ಭಾರತಿ ಎಸ್. ರೈ , ಅಮ್ಟಾಡಿ ಕ್ಷೇತ್ರ: ರಮೇಶ ಪೂಜಾರಿ ಬಟ್ಟಾಜೆ ಮತ್ತು ದಿವಾಕರ ಪಂಬದಬೆಟ್ಟು , ಕಾವಳಮೂಡೂರು ಕ್ಷೇತ್ರ : ಹರಿಶ್ಚಂದ್ರ ಪೂಜಾರಿ ಕಜೆಕಾರು ಮತ್ತು ವಿಶ್ವನಾಥ ಸಾಲಿಯಾನ್ ಬಿತ್ತ, ಕೊಳ್ನಾಡು ಕ್ಷೇತ್ರ: ಯೋಗೀಶ್ ಅಳ್ವ ಪುದ್ದೊಟ್ಟು ಮತ್ತು ಬಿ. ಚಂದ್ರಶೇಖರ ರೈ , ಅಳಕೆ ಕ್ಷೇತ್ರ : ಕೆ. ಭವಾನಿ ರೈ ಮತ್ತು ಗೀತಾಲತಾ ಟಿ. ಶೆಟ್ಟಿ , ಕೆದಿಲ ಕ್ಷೇತ್ರ: ಸುಂದರ ನಾಯ್ಕ ಮತ್ತು ಜಗದೀಶ ಡಿ. , ಮಾಣಿ ಕ್ಷೇತ್ರ: ನೇಮಿರಾಜ ರೈ ಮತ್ತು ಬಾಲಕೃಷ್ಣ ಆಳ್ವ ಕೊಡಾಜೆ, ಕಡೇಶ್ವಾಲ್ಯ ಕ್ಷೇತ್ರ: ಆರ್. ಚೆನ್ನಪ್ಪ ಕೋಟ್ಯಾನ್ ಮತ್ತು ಚಂದ್ರಶೇಖರ ಪೂಜಾರಿ, ಪಾಣೆಮಂಗಳೂರು ಕ್ಷೇತ್ರ: ಕೆ. ಪದ್ಮನಾಭ ರೈ ಮತ್ತು ಅರವಿಂದ ಭಟ್
ತುಂಬೆ ಕ್ಷೇತ್ರ : ಪದ್ಮನಾಭ ನರಿಂಗಾನ, ವಿಠಲ ಸಾಲ್ಯಾನ್, ಚಂದ್ರಹಾಸ, ವರ್ತಕರ ಕ್ಷೇತ್ರ: ಎಸ್.ಎಂ. ಹುಸೈನ್ ಮತ್ತು ಬಾಲಕೃಷ್ಣ ಆಳ್ವ ಸ್ಪರ್ಧೆಯಲ್ಲಿದ್ದಾರೆ.
ಒಟ್ಟು 46,001 ಮಂದಿ ಮತದಾರರಿದ್ದು, ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ಸುತ್ತು ಮನೆ ಮನೆ ಭೇಟಿ ನಡೆಸಿ ಹೊಸ ವರ್ಷದ ಪ್ರತಿಷ್ಠೆ ಚುನಾವಣೆಯಾಗಿ ಸ್ವೀಕರಿಸಿರುವುದು ಕಂಡು ಬಂದಿದೆ. ಕಳೆದ ಅವಧಿಯಲ್ಲಿ ಬಿಜೆಪಿ 8 ಮಂದಿ ಮತ್ತು ಕಾಂಗ್ರೆಸ್ 4 ಮಂದಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿ ಬೆಂಬಲಿತರು ಅಧಿಕಾರ ನಡೆಸಿದ್ದರು.
ನೇರ ಪೈಪೋಟಿ:
ಈ ಬಾರಿಯೂ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಉತ್ಸಾಹದಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸ್ವಕ್ಷೇತ್ರದಲ್ಲಿ ನಡೆಯುವ ಎಪಿಎಂಸಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವುದು ಕಂಡು ಬಂದಿದೆ. ಇದಕ್ಕಾಗಿ ಅವರು ಕಾಂಗ್ರೆಸ್ನಲ್ಲಿ ಬಹುತೇಕ ಬಲಾಢ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯುತ್ತಿದ್ದು, ಇದೇ 14ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಪರಮೇಶ್ವರ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ

