ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಇಲ್ಲಿನ ಪುರಸಭೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ರೂ 1.40ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಉದ್ಘಾಟನೆಗೊಂಡ ಬಳಿಕ ಪ್ರವೇಶ ನಿರ್ಬಂಧಿಸಲಾಗಿದ್ದ ‘ಜೋಡುಮಾರ್ಗ ಉದ್ಯಾನವನ‘ (ಟ್ರೀಪಾರ್ಕ್) ಗುರುವಾರದಿಂದ ಮತ್ತೆ ಪುನರಾರಂಭಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಉತ್ಸುಕತೆಯಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬದಿ ಅನಧಿಕೃತ ತ್ಯಾಜ್ಯ ಸಂಗ್ರಹಣಾ ಕೇಂದ್ರವಾಗಿ ರೂಪುಗೊಂಡಿದ್ದ ಜಮೀನು ಸಮತಟ್ಟುಗೊಳಿಸಿ ದುರ್ನಾತ ಬೀರುತಿದ್ದ ಪ್ರದೇಶವನ್ನು ಹೂಗಿಡಗಳ ಮೂಲಕ ಪರಿಮಳ ಬೀರುವಂತೆ ಟ್ರೀ ಪಾರ್ಕ್ ನಿರ್ಮಿಸುವ ಮೂಲಕ ಕೆಲವೊಂದು ಗೊಂದಲಗಳ ನಡುವೆಯೂ ಜನಾಕರ್ಷಣೆಗೆ ಕಾರಣವಾಗಿತ್ತು.

garden-1

ಈ ಗಾರ್ಡನ್ ನಿರ್ಮಿಸುವಲ್ಲಿ ಗುತ್ತಿಗೆ ವಹಿಸಿಕೊಂಡಿದ್ದ ಮಂಗಳೂರಿನ ಪ್ರಮೋದ್ ನರ್ಸರಿ ಸಂಸ್ಥೆಗೆ ಇದೀಗ ಪ್ರಾಯೋಗಿಕವಾಗಿ ಮಾಸಿಕ ರೂ 60ಸಾವಿರ ಮೊತ್ತದಂತೆ ನಿರ್ವಹಣೆಗಾಗಿ ಮತ್ತೆ ಗುತ್ತಿಗೆ ವಹಿಸಲಾಗಿದೆ. ಪ್ರವೇಶ ಶುಲ್ಕ ಎಂಬಂತೆ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಮಕ್ಕಳಿಗೆ ರೂ 5 ಮತ್ತು ಹಿರಿಯರಿಗೆ ರೂ 10ರಂತೆ ಟಿಕೇಟು ವಸೂಲಿ ಪ್ರಕ್ರಿಯೆಯನ್ನು ಸ್ವತಃ ಪುರಸಭೆ ವತಿಯಿಂದಲೇ ನಿರ್ವಹಿಸಲಾಗುತ್ತದೆ ಎಂದು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *