ಬಿ.ಸಿ.ರೋಡು : ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದವರರಿಗೆ ಬಂಟ್ವಾಳ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ನಲ್ಲಿ ಇಂದು ಶ್ರದ್ದಾಂಜಲಿ ಸಲ್ಲಿಸಲಾಯಿತು.

ಬ್ಯಾಂಕ್ನ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ದಿವಂಗತ ಮಹದೇವ ಪ್ರಸಾದ್ರವರು ಹಂತ ಹಂತವಾಗಿ ಮೇಲೆ ಬಂದವರು. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಬಿ.ಸಿ.ರೋಡಿನ ಬ್ಯಾಂಕಿಗೆ 15 ಲಕ್ಷ, ಪುತ್ತೂರು ಬ್ಯಾಂಕ್ನ ಶಿಲಾನ್ಯಾಸ ಸಂದರ್ಭದಲ್ಲಿ 10 ಲಕ್ಷ, ಬೆಳ್ತಂಗಡಿ ಬ್ಯಾಂಕಿಗೆ 7 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಅವರು ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದು ಜನಮಾನಸದಲ್ಲಿ ತಮ್ಮ ಹೆಸರನ್ನು ಉಳಿಸಿದ್ದಾರೆ ಎಂದು ತಿಳಿಸಿದರು. ಬ್ಯಾಂಕ್ನ ಉಪಾದ್ಯಕ್ಷ ಸಂಜೀವ ಪೂಜಾರಿ ರೈತರಿಗೆ ಒತ್ತು ನೀಡಿದ್ದು ಪ್ರಾಮಾಣಿಕ ಸಚಿವರಾಗಿದ್ದು ಅವರದ್ದು ಸರಳ ಜೀವನ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿಯವರು ಉತ್ತಮ ಆಡಳಿತಗಾರರನ್ನು ನಾವು ಕಳೆದುಕೊಂಡಿದ್ದೇವೆ ಎಂದು ತಿಳಿಸಿದರು. ಸರಳತೆ ಮತ್ತು ಆದರ್ಶ ವ್ಯಕ್ತಿತ್ವವನ್ನು ರೂಪಿಸಿದವರು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ತಿಳಿಸಿದರು.

ವರ್ತಕರ ಬ್ಯಾಂಕ್ನ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಪರಮೇಶ್ವರ ಮೂಲ್ಯ, ಮಧೂಸೂದನ್ ಶೆಣೈ, ಬ್ಯಾಂಕ್ನ ಬಂಟ್ವಾಳ ವ್ಯವಸ್ಥಾಪಕ ಶೇಖರ ಎಂ., ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ವೆಂಕಪ್ಪಯ್ಯ, ಸುಳ್ಯ ಶಾಖೆಯ ಬಾಲಕೃಷ್ಣ, ಪುತ್ತೂರು ಶಾಖೆಯ ಯಶೋಧರ ಜೈನ್ ಭಾಗವಹಿಸಿದ್ದರು.
