ಬಂಟ್ವಾಳ : ಕಲೆ ಹೆಚ್ಚು ಹೆಚ್ಚು ವಾಣಿಜ್ಯೀಕರಣದತ್ತ ಸಾಗುವಾಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ನಡು ಬಡಗುತಿಟ್ಟು ಅಥವಾ ಆರಾಡಿ ಮಟ್ಟಾಡಿ ಪರಂಪರೆಯ ಯಕ್ಷಗಾನದ ಸೊಬಗನ್ನು ಸವಿಯಬೇಕಾದರೆ ಇಂದು ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನಗಳನ್ನೇ ನೋಡಬೇಕಾಗುತ್ತದೆ. ಇಂತಹಾ ಕೊಡುಗೆಯನ್ನು ನೀಡಿರುವ ದಿ.ಕಾರ್ಕಡ ಶ್ರೀನಿವಾಸ ಉಡುಪರು ಸದಾ ಸರ್ವದಾ ಸ್ಮರಣೀಯರು ಎಂದು ಖ್ಯಾತ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ನುಡಿದರು.
ಅವರು ಮೊಡಂಕಾಪು ದೀಪಿಕಾ ಪೌಢಶಾಲೆ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಏರ್ಪಡಿಸಿದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಗೈದರು.
ದೀಪಿಕಾ ಪ್ರೌಢಶಾಲಾ ಸಂಚಾಲಕ ರೆ /ಫಾ /ಎಲ್.ಮ್ಯಾಕ್ಸಿಂ ನೊರೊನ್ಹಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಹಾಗೂ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಸಾಲಿಗ್ರಾಮ ಮಕ್ಕಳ ಮೇಳದ ಸಹಸಂಸ್ಥಾಪಕ ಎಚ್.ಶ್ರೀಧರ ಹಂದೆ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪನ್ಯಾಸಕ ಚೇತನ್ ಮುಂಡಾಜೆ ಅಭಿನಂದನಾ ಭಾಷಣ ಮಾಡಿದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮೋಹನ್ ರಾವ್ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ವಂದಿಸಿದರು. ಉಪನ್ಯಾಸಕ ಸುನೀಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು.

