ಬಂಟ್ವಾಳ: ಬೈಕ್‍ನಲ್ಲಿ ಬರುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕ್‍ನಲ್ಲಿ ಬಂದ ಮೂವರ ತಂಡ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕಳ್ಳಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಮಲ್ಲೂರು ಬದ್ರಿಯಾ ನಗರದ ನಿವಾಸಿ, ಲಾರಿ ಚಾಲಕ ಅಬ್ಬಾಸ್ ಎಂಬವರ ಪುತ್ರ ಜುನೈದ್(17), ಬಿ.ಸಿ.ರೋಡ್ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಸಿನಾನ್(18) ಚೂರಿ ಇರಿತದಿಂದ ಗಾಯಗೊಂಡವರು. ಇವರು ಗುರುಪುರ ಕೈಕಂಬದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ವಾಪಸಾಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಮೂವರು ಅಡ್ಡಗಟ್ಟಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರು ಗಾಯಾಳುಗನ್ನು ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಮಂಗಳೂರು ಕಮಿಷನರ್ ಚಂದ್ರಶೇಖರ್, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಆಸ್ಪತ್ರೆಗೆ ಭೇಟಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
