ವಿಟ್ಲ: ಶನಿಪೂಜೆಗೆಂದು ಸಿದ್ದಪಡಿಸಿದ್ದ ಜಾಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿ ದೂಳೆಬ್ಬಿಸಿದನೆಂಬ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರಿಗೆ ಗಾಯವಾದ ಘಟನೆ ಕರೋಪಾಡಿ ಮಿತ್ತನಡ್ಕ ಶುಕ್ರವಾರ ರಾತ್ರಿ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಮಿತ್ತನಡ್ಕ ನಿವಾಸಿ ರಾಜೇಶ್ ನಾಯಕ್ (38), ರಮೇಶ್ (38) ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ. ಇಬ್ಬರೂ ಪುತ್ತೂರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಬಿಗಿ ಬಂದೋ ಬಸ್ತು ಕಲ್ಪಿಸಲಾಗಿದ್ದು, ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ವಿವರ:
ಮಿತ್ತನಡ್ಕದಲ್ಲಿ ಶನಿವಾರ ನಡೆಯಲಿದ್ದ ಸಾರ್ವಜನಿಕ ಶನಿ ಪೂಜಾ ಕಾರ್ಯಕ್ರಮದ ಅಂಗವಾಗಿ ಜಗಶ್ರೀ ನವೋದಯ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಯುವಕರು ಶುಕ್ರವಾರ ಸಂಜೆ ತೋರಣ ಕಟ್ಟುವುದು, ಶಾಮಿಯಾನ ಹಾಕುವುದು ಇತ್ಯಾದಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಸುಮಾರು 8.30ರ ಸುಮಾರಿಗೆ ಖಲೀಲ್ ಎಂಬಾತ ಬೈಕ್ ಚಲಾಯಿಸಿ ಧೂಳೆಬ್ಬಿಸಲು ಯತ್ನಿಸಿದ್ದಾನೆ. ರಾಜೇಶ್ ಈ ಸಂದರ್ಭ ದೂಳೆಬ್ಬಿಸದಂತೆ ಮನವಿ ಮಾಡಿದ್ದು, ಅಲ್ಲಿಂದ ತೆರಳಿದ್ದಾನೆ. ರಾತ್ರಿ ಸುಮಾರು 9.15ಕ್ಕೆ ನವಾಫ್, ಸಜಾಬ್, ಖಲೀಲ್ಸುಲೈಮಾನ್, ಖಲಂದರ್ ಮತ್ತು ಇತರರನ್ನು ಕರೆದುಕೊಂದು ಬಂದ ಖಲೀಲ್ ಅವಾಚ್ಯವಾಗಿ ನಿಂದಿಸಿದ್ದಾನೆ. ರಾಜೇಶ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ನವಾಫ್ ಕೈಯಲ್ಲಿದ್ದ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದಿದ್ದಾನೆ. ಸಜಾಬ್ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಕೈಗೆ ಹೊಡೆದ್ದಾನೆ. ಗಲಾಟೆಯನ್ನು ಬಿಡಿಸಲು ಬಂದ ರಮೇಶ ಎಂಬವರಿಗೆ ಜಾತಿ ನಿಂದನೆ ಮಾಡಿ ಹೋಯಾಳಿ, ಹಲ್ಲೆ ನಡೆಸಿ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿದೂರು:
ಬಾಯಾರು ಮಸೀದಿಯ ಸ್ವಲಾತ್ ಕಾರ್ಯಕ್ರಮಕ್ಕೆ ಹೋಗಲು ದೇವಸ್ಯ ನಿವಾಸಿ ಇಬ್ರಾಹಿಂ ಖಲೀಲ್ (20) ಸ್ನೇಹಿತರಾದ ಸಜಾಪ್ ಮತ್ತು ನವಾಫ್ ಜತೆಯಲ್ಲಿ ಮಿತ್ತನಡ್ಕದಲ್ಲಿ ನಿಂತ ಸಮಯ ದೂಳೆಬ್ಬೆಸಿದ ವಿಚಾರದಲ್ಲಿ ರಾಜೇಶ್, ಪ್ರಶಾಂತ್, ಪ್ರಸಾದ್, ಉಮೆಶ್ಗೌಡ, ಸುರೇಶ್, ವಿನಾಯಕ, ಶರತ್ ಅವಾಚ್ಯವಾಗಿ ಬೈದಿದ್ದಾರೆ. ರಾಜೇಶ್ ಕತ್ತಿಯಿಂದ ಕಡಿಯಲು ಬಂದು ಕೈಗೆ ತಾಗಿದ ಬಗ್ಗೆ ವಿಟ್ಲ ಠಾಣೆಗೆ ಪ್ರತಿದೂರನ್ನು ಖಲೀನ್ ನೀಡಿದ್ದಾನೆ.

