ಮಂಗಳೂರು : ಇದೇ ಮೊದಲ ಬಾರಿಗೆ ಮೂಡಬಿದ್ರೆಯಲ್ಲಿ ಆಗಸ್ಟ್ 5ರಿಂದ 12ರವರೆಗೆ ಸೇನಾ ನೇಮಕಾತಿ ರಾಲಿ ನಡೆಯಲಿದೆ.
ಈ ಕುರಿತು ಪೂರ್ವಭಾವಿ ಸಭೆ ಗುರುವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ಸುಮಾರು ಎಂಟು ದಿನಗಳ ಕಾಲ ಮೂಡಬಿದ್ರೆಯ ವಿದ್ಯಾಗಿರಿ ಮೈದಾನದಲ್ಲಿ ಈ ನೇಮಕಾತಿ ರ್ಯಾಲಿಯು ನಡೆಯಲಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಯುವಕರು ಆಗಮಿಸಲಿದ್ದಾರೆ. ಪ್ರತಿದಿನ ಸುಮಾರು 2000 ಮಂದಿಗೆ ಸೇನಾ ನೇಮಕಾತಿಗೆ ಅರ್ಹತಾ ಪರೀಕ್ಷೆ ನಡೆಲಿದೆ ಎಂದು ಅವರು ತಿಳಿಸಿದರು.

ಸೇನೆಯಲ್ಲಿ ವಿವಿಧ ಜವಾನ ಹುದ್ದೆಗಳಿಗೆ ಇಲ್ಲಿ ನೇಮಕಾತಿ ನಡೆಯಲಿದೆ. ಸುಮಾರು 300ರಷ್ಟು ಅಧಿಕಾರಿಗಳು, ಸೇನಾ ಸಿಬ್ಬಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್, ಕುಡಿಯುವ ನೀರು ಮತ್ತು ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಆಹಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಭಾರತೀಯ ಸೇನೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸೇರುವವರ ಸಂಖ್ಯೆ ಇತರೆಡೆಗೆ ಹೋಲಿಸಿದರೆ, ಬಹಳ ಕಡಿಮೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ನಡೆಯತ್ತಿರುವ ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ ದ.ಕ. ಜಿಲ್ಲೆಯ ಹೆಚ್ಚು ಯುವಕರು ಪಾಲ್ಗೊಂಡು ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಬ್ರಾಹಿಂ ವಿನಂತಿಸಿದರು.
ಸಭೆಯಲ್ಲಿ ಮಾತನಾಡಿದ ಸೇನಾ ನೇಮಕಾತಿ ನಿದರ್ೇಶಕ ಕರ್ನಲ್ ವಿಶ್ವನಾಥ್, ಈ ರ್ಯಾಲಿಯಲ್ಲಿ ನಿಗದಿತ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯಲ್ಲಿರುವ ಯಾರೂ ಕೂಡಾ ಪಾಲ್ಗೊಳ್ಳಬಹುದು. ದಾಖಲೆಗಳೊಂದಿಗೆ ನೇರವಾಗಿ ರ್ಯಾಲಿಗೆ ಆಗಮಿಸಬಹುದು. ಮೂಡಬಿದ್ರೆಯಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ಉತ್ತೀರ್ಣರಾದವರಿಗೆ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಡಿಪಿಐ ಮೋಸಸ್ ಜಯಶೇಖರ, ಡಿಸಿಪಿ ಡಾ. ಜಗದೀಶ್, ಮೂಡಬಿದ್ರೆ ತಹಶೀಲ್ದಾರ್ ಮುಹಮದ್ ಇಸಾಕ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
